ಮೂಢನಂಬಿಕೆಗಳ ಮೊರೆ ಹೋದ ಭದ್ರಯ್ಯನಹಳ್ಳಿ ಗ್ರಾಮಸ್ಥರು..!

ಈ ಸುದ್ದಿಯನ್ನು ಶೇರ್ ಮಾಡಿ

Article

– ಆರ್.ಪುಟ್ಟಸ್ವಾಮಿ, ಹನೂರು
ಆಧುನಿಕತೆ ಹಾಸುಹೊಕ್ಕಾಗಿದ್ದರೂ ರಾಜ್ಯದ ಎಷ್ಟೋ ಕುಗ್ರಾಮಗಳಲ್ಲಿ ಮೌಢ್ಯತೆ ಇನ್ನೂ ಹೋಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೊಳ್ಳೇಗಾಲ ತಾಲೂಕು ಹಸೂರು ಹೋಬಳಿಗೆ ಸೇರಿರುವ ಭದ್ರಯ್ಯನಹಳ್ಳಿ. ಭದ್ರಯ್ಯನಹಳ್ಳಿ ಶೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿದ್ದರೂ ಕೂಡ ಇದೊಂದು ಕುಗ್ರಾಮ. ಇಲ್ಲಿನ ಜನ ಇಂದಿಗೂ ಮೌಢ್ಯಗಳಿಗೇ ಮೊರೆ ಹೋಗುತ್ತಾರೆ. ಹಳ್ಳಿಯಲ್ಲಿ ಎಲ್ಲೂ ಸ್ವಚ್ಛತೆ ಇಲ್ಲ. ಚರಂಡಿಗಳು ಕಟ್ಟಿಕೊಂಡು ದುರ್ವಾಸನೆ ಬೀರುತ್ತಿವೆ. ಸೊಳ್ಳೆಗಳ ಕಾಟ ಮಿತಿಮೀರಿದೆ. ಹಾಗಾಗಿ ಮಲೇರಿಯಾ ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಆದರೆ, ಇಲ್ಲಿನ ಜನ ಇದೆಲ್ಲ ದೇವರ ಕಾಟ ಎಂದು ನಂಬಿದ್ದಾರೆ. ಆದ್ದರಿಂದ ಮಂತ್ರವಾದಿಗಳ ಮೊರೆ ಹೋಗುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ದುಡ್ಡು ಸುಲಿಯುವ ಮಂತ್ರವಾದಿಗಳು ಬೇಕಾದಷ್ಟು ಮಂದಿ ಹುಟ್ಟಿಕೊಂಡಿದ್ದಾರೆ. ತಂತ್ರಜ್ಞಾನದ ಯುಗದಲ್ಲೂ ಭದ್ರಯ್ಯನಹಳ್ಳಿ ಜನರು ಮೂಢನಂಬಿಕೆಯಲ್ಲೇ ಮುಳುಗಿದ್ದಾರೆ. ಹಾಗಾಗಿಯೇ ಯಾವುದೇ ಜ್ವರ ಬಂದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಬಿಟ್ಟು ಯಂತ್ರ ಕಟ್ಟಿಸಿಕೊಂಡು ಬರುವುದು ಬೇವಿನ ಸೊಪ್ಪಿನಿಂದ ಮಂತ್ರ ಮಾಡಿಸಿಕೊಂಡು ಬರುವುದನ್ನು ಮಾಡುತ್ತಿದ್ದಾರೆ. ಸಾರ್ವಜನಿಕರ ಸೇವೆ ಮತ್ತು ಕರ್ತವ್ಯದಲ್ಲಿ ದಕ್ಷತೆ ಹಾಗೂ ಕಾಳಜಿ ಇಲ್ಲದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯಕ್ಕೊಳಗಾಗಿರುವ ಭದ್ರಯ್ಯನಹಳ್ಳಿ ಅಸ್ವಚ್ಛತೆ ಹಾಗೂ ಅಭದ್ರತೆಗೊಳಗಾಗಿ ಗ್ರಾಮಸ್ಥರು ನಾನಾ ರೋಗ-ರುಜಿನಗಳಿಗೆ ತುತ್ತಾಗಿದ್ದಾರೆ.

ಹನೂರು ತಾಲ್ಲೂಕು ಕೇಂದ್ರದಿಂದ 21 ಕಿಲೋ ಮೀಟರ್ ಅಂತರ ಹಾಗೂ ಕೌದಳ್ಳಿ ಜಿಲ್ಲಾ ಪಂಚಾಯಿತಿ ಮತ್ತು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಕೇವಲ 1 ಕಿಲೋ ಮೀಟರ್ ದೂರ ಇರುವ ಭದ್ರಯ್ಯನಹಳ್ಳಿಯಲ್ಲಿ ಗ್ರಾಮದ ಹಿರಿಯರು, ಕಿರಿಯರು, ಮಕ್ಕಳು ಮತ್ತು ಮಹಿಳೆಯರು ಮೈ-ಕೈ ನೋವು, ಜ್ವರ, ತಲೆ ನೋವು, ನೆಗಡಿಯಿಂದ ಬಳಲುತ್ತಿದ್ದಾರೆ. ಮೊದಮೊದಲಿಗೆ ಸಾಮಾನ್ಯ ಕಾಯಿಲೆ ಎಂದು ತಿಳಿದು ಆಸ್ಪತ್ರೆಗೆ ಹೋಗಿ ಬರುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ, ವಾರ ಕಳೆದರೂ ಗುಣಮುಖವಾಗದ ರೋಗದಿಂದ ಬಳಲುತ್ತಿರುವ ಜನರಿಗೆ ಟೈಫೈಡ್, ಮಲೇರಿಯಾದಂತಹ ಕಾಯಿಲೆಗಳು ಅಶುದ್ಧತೆ, ಅನೈರ್ಮಲ್ಯ, ಕಲ್ಮಶಗೊಂಡ ಕುಡಿಯುವ ನೀರಿನಿಂದ ಹರಡುತ್ತವೆ ಎಂಬ ಅರಿವಿಲ್ಲದೆ ಗ್ರಾಮ ದೇವತೆ ಮುನಿಸಿಕೊಂಡಿದ್ದಾಳೆ. ಅದಕ್ಕಾಗಿ ಈ ರೀತಿ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದುಕೊಂಡಿದ್ದಾರೆ.

ಅಶುದ್ಧ ನೀರು ಸೇವನೆ ಮತ್ತು ಸೊಳ್ಳೆಗಳ ಉಪಟಳದಿಂದ ಗ್ರಾಮದ ಗುಡ್ಡಿಮುನಿಯನ ಮನೆ ಸದಸ್ಯರು ಹಾಗೂ ರಂಜಿತಾ ಎಂಬುವವರು ಟೈಫೈಡ್ ಕಾಯಿಲೆ ಬಂದಿದ್ದರೆ ಅದೇ ಗ್ರಾಮದ ತಿರುಮಶೆಟ್ಟಿ ಮಗ ಮಾದೇವನಿಗೆ ಮಲೇರಿಯಾ, ಜಾಂಡಿಸ್‍ನಂತ ಮಾರಕ ರೋಗ ಕಾಣಿಸಿಕೊಂಡಿರುವುದು ರಕ್ತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಮೂಲಕ ತಿಳಿದು ಬಂದಿದೆ. ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಇವರ ಮನಸ್ಸು ದೇವರು-ದಿಂಡರು ಎಂಬ ಮೂಢ ನಂಬಿಕೆಯಲ್ಲಿ ಚಡಪಡಿಸುತಿರುವುದು ವಾಸ್ತವ ಅಂಶ. ಒಂದು ವರ್ಷ ಹಿಂದೆ ಭದ್ರಯ್ಯನಹಳ್ಳಿ ಸುವರ್ಣ ಗ್ರಾಮ ಯೋಜನೆ ಪರಿಕಲ್ಪನೆಗೆ ಸರ್ಕಾರ ಒತ್ತು ನೀಡಿತ್ತು. ಅದರಂತೆ ಭೂಸೇನಾ ನಿಗಮ ಮಂಡಳಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿಯಡಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಅನುಷ್ಠಾನಗೊಳಿಸಿತ್ತು.

ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗುತ್ತಿಗೆದಾರ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಿಸಿ ಅಪೂರ್ಣ ಮತ್ತು ಅವೈಜ್ಞಾನಿಕ ಕೆಲಸಕ್ಕೆ ಆಸ್ಪದ ನೀಡಿದ ಹಿನ್ನೆಲೆಯಲ್ಲಿ ಕಳಪೆ ಚರಂಡಿ ನಿರ್ಮಾಣವಾಯಿತು. ಅದರ ಪ್ರತಿಫಲವಾಗಿ ಚರಂಡಿ ತುಂಬ ಹೂಳು ತುಂಬಿದೆ. ಸರಾಗವಾಗಿ ಹರಿಯದೆ ನೆಲೆ ನಿಂತು ಬಚ್ಚಲು ನೀರಿನಿಂದ ಅನೈರ್ಮಲ್ಯ ಮತ್ತು ಅಸ್ವಚ್ಛತೆ ಭದ್ರಯ್ಯನಹಳ್ಳಿಯನ್ನು ಅಭದ್ರಗೊಳಿಸುವ ಮೂಲಕ ನುಂಗುತ್ತ ಹೋಗಿದೆ. ಮತ್ತೊಂದೆಡೆ ಗ್ರಾಮದ ಕುಡಿಯುವ ನೀರಿನ ಸರಬರಾಜು ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆ ಕಾಣದೆ ಸಾಂಕ್ರಾಮಿಕ ಕಾಯಿಲೆ ಗ್ರಾಮಸ್ಥರ ಮತ್ತೊಂದು ಅನಾರೋಗ್ಯಕ್ಕೆ ಕಾರಣವಾಗಿದೆ.

ಅನುದಾನದ ಕೊರತೆ: ನೆಲ ಕಚ್ಚಿದ ಕಾಮಗಾರಿ: ಅನುದಾನದ ಕೊರತೆಯಿಂದ ಕಳೆದ ಎಂಟು ತಿಂಗಳಿಂದ ಸುವರ್ಣ ಗ್ರಾಮ ಯೋಜನೆ ಕಾಮಗಾರಿ ನೆಲೆ ಕಚ್ಚಿದೆ. 70 ಲಕ್ಷ ಯೋಜನೆಯಲ್ಲಿ ಕೇವಲ 30 ಲಕ್ಷ ಮಾತ್ರ ಖರ್ಚಾಗಿರುತ್ತದೆ. ಅದರಲ್ಲಿ ಪ್ರಭಾವಿ ಮುಖಂಡರು, ಸದಸ್ಯರು ಪ್ರತಿಷ್ಠೆಯ ಪಣವಾಗಿ ತಮ್ಮ ತಮ್ಮ ಮನೆ ಮುಂದೆಯೇ ಸಿಸಿ ರಸ್ತೆ, ಚರಂಡಿ ಆಗಬೇಕೆಂಬ ಹಠಕ್ಕೆ ಬಿದ್ದು, ಯೋಜನೆಯ ಸಮಗ್ರ ಗ್ರಾಮಾಭಿವೃದ್ಧಿಗೆ ಪೂರಕವಾದ ಸಮುದಾಯ ಭವನ, ಗರಡಿ ಮನೆ, ಗೊಬ್ಬರದ ಗುಂಡಿ, ಸೋಲಾರ್ ಬೀದಿ ದೀಪಗಳ ಆಯ್ಕೆಯನ್ನೇ ಕಡೆಗಣಿಸಿರುವುದು ಜಗಜ್ಜಾಹೀರಾಗಿದೆ. ಯೋಜನೆಗೆ ಪೂರಕ ಕ್ರಿಯಾ ಯೋಜನೆಯಂತೆ ನೀಲಿನಕ್ಷೆ ತಯಾರಿಕೆ ವಿಫಲತೆಯಿಂದ ಕಾಮಗಾರಿ ಅವ್ಯವಸ್ಥೆ ಹಾಗೂ ಅಸ್ತವ್ಯಸ್ತಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತೆ ಕಾರಣ. ಕಡೆಗೂ ಎಚ್ಚೆತ್ತುಕೊಂಡಿರುವ ಜನ ಒಂದೆರಡು ರಕ್ತ ಪರೀಕ್ಷೆ ಹಾಗೂ ಸ್ಕ್ಯಾನ್ ಮಾಡಿಸಿರುವುದರಿಂದ ಯಾವ ಕಾಯಿಲೆ ಬಂದಿದೆ ಎಂಬುದು ಗೊತ್ತಾಗುತ್ತಿದೆ. ಜನರಿಗೆ ಮನವೊಲಿಸಿ ಚಿಕಿತ್ಸೆ ಕೊಡಿಸಬಹುದು. ಆದರೆ, ಗ್ರಾಮದ ಅನೈರ್ಮಲ್ಯತೆಗೆ ಚುಚ್ಚುಮದ್ದು ಕೊಡುವವರೇ ಯಾರೂ ಇಲ್ಲದಂತಾಗಿಬಿಟ್ಟಿದೆ. ಕಾಯಿಲೆಗಳಿಂದ ಸಾವು ಸಂಭವಿಸುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಚರಂಡಿ ಹಾಗೂ ಓವರ್‍ಹೆಡ್ ಟ್ಯಾಂಕ್ ಸ್ವಚ್ಛಪಡಿಸಬೇಕಿದೆ.

Facebook Comments

Sri Raghav

Admin