ಪೆಟ್ರೋಲ್- ಡೀಸಲ್ ದರ ಏರಿಕೆ ವಿರೋಧಿಸಿ ಭಾರತ್ ಬಂದ್ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Bharat-Band

ಬೆಂಗಳೂರು, ಸೆ.10- ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ಕರೆ ನೀಡಿರುವ ಭಾರತ್ ಬಂದ್ ಆರಂಭವಾಗಿದೆ.ಭಾರತ್ ಬಂದ್ ಕುರಿತ ಲೈವ್ ಅಪ್ಡೇಟ್ಸ್ ಇಲ್ಲಿವೆ ನೋಡಿ.

# ಕರಾವಳಿ ಜಿಲ್ಲೆಗಳಲ್ಲೂ ಭಾರತ್ ಬಂದ್‍ಗೆ ಉತ್ತಮ ಪ್ರತಿಕ್ರಿಯೆ
ಮಂಗಳೂರು, ಸೆ.10- ಭಾರತ್ ಬಂದ್‍ಗೆ ಕರಾವಳಿ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ, ಮಂಗಳೂರು, ಉಡುಪಿ, ಕುಂದಾಪುರ, ಬಂಟ್ವಾಳ, ಸುಳ್ಯ, ಪುತ್ತೂರು ಸೇರಿದಂತೆ ಹಲವೆಡೆ ಬಂದ್‍ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮಂಗಳೂರಿನ ಜ್ಯೋತಿ ಸರ್ಕಲ್ ಹಾಗೂ ಕುಲಶೇಖರದಲ್ಲಿ ಟಯರ್‍ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಲ್ಮಠ ಸಮೀಪ ಬಸ್ ಗೆ ಕಲ್ಲುತೂರಾಟ ನಡೆಸಲಾಗಿದೆ.

ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕದ್ರಿಯ ಶಿವಭಾಗ್ ರೆಸ್ಟೋರೆಂಟ್ ಮೇಲೆ ಕಲ್ಲುತೂರಾಟ ನಡೆಸಿದ್ದು, ರೆಸ್ಟೋರೆಂಟ್‍ನ ಕಿಟಕಿ ಗಾಜು ಪುಡಿ, ಪುಡಿಯಾಗಿದೆ. ಮಂಗಳೂರಿನಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದು, ಸಂಚಾರ ಬಿಕೋ ಎನ್ನುತ್ತಿದೆ. ಕೆಲವೆಡೆ ಬಲವಂತದಿಂದ ಬಂದ್ ಮಾಡಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ.
# ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ಕಲ್ಲೆಸೆತ:
ಭಾರತ ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಬಂಟ್ವಾಳದಲ್ಲಿಂದು ಬೆಳಗ್ಗೆ ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಕಲ್ಲೆಸೆದ ಘಟನೆ ನಡೆದಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆ ಸೇರಿ ಅಲ್ಲಲ್ಲಿ ಟಯರ್‍ಗಳಿಗೆ ಬೆಂಕಿ ಹಾಕಿ ರಸ್ತೆ ತಡೆಗೆ ಯತ್ನಿಸಲಾಗಿದೆ. ಈ ನಡುವೆ ರಸ್ತೆ ತಡೆಗೆ ಯತ್ನಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿಯಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್‍ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಇದಕ್ಕೂ ಮೊದಲು ಮುಂಜಾನೆ 5:30ರ ವೇಳೆಗೆ ಬಂಟ್ವಾಳದಲ್ಲಿ ಇನ್ನೊಂದು ಬಸ್ ಮೇಲೂ ಕಲ್ಲೆಸೆತ ನಡೆದಿದೆ. ಇದರಿಂದ ಅದರ ಗಾಜಿಗೂ ಹಾನಿಯಾಗಿದೆ.

ಜಕ್ರಿಬೆಟ್ಟುವಿನಲ್ಲಿ ರಸ್ತೆ ತಡೆ ಮಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತುಂಬೆ ಬಳಿ ಟಯರ್ ಹಾಕಿ ರಸ್ತೆ ತಡೆ ಮಾಡಿದ್ದನ್ನು ಪೊಲೀಸರು ತೆರವು ಮಾಡಿದ್ದಾರೆ. ಮಾಣಿ ಸಮೀಪದ ಹಳೀರ ಎಂಬಲ್ಲಿ ರಸ್ತೆ ಮಧ್ಯೆ ಟಯರ್ ಸುಟ್ಟು ಹಾಕಿದ ಘಟನೆ ಬೆಳಗ್ಗೆ ನಡೆದಿದೆ. ಕಲ್ಲಡ್ಕ ಕೆ.ಸಿ.ರೋಡ್, ಮಾಣಿ ನಾರಾಯಣ ಗುರು ಮಂದಿರ ಬಳಿಯ ರಸ್ತೆಯಲ್ಲಿ ಬಂದ್ ಬೆಂಬಲಿಗರು ಟಯರ್‍ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಸಕಾಲಿಕವಾಗಿ ಆಗಮಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಟಯರ್‍ಗಳನ್ನು ಬದಿಗೆ ಸರಿಸಿ, ಬೆಂಕಿ ನಂದಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಕಲ್ಲಡ್ಕ ಸಹಿತ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

# ಭಾರತ್ ಬಂದ್‍ನಿಂದಾಗಿ ಕೆಎಸ್‍ಆರ್‍ಟಿಸಿಗೆ 15 ಕೋಟಿಗೂ ಹೆಚ್ಚು ನಷ್ಟ
ಬೆಂಗಳೂರು, ಸೆ.10- ಭಾರತ್ ಬಂದ್‍ನಿಂದಾಗಿ ಕೆಎಸ್‍ಆರ್‍ಟಿಸಿ ಈಶಾನ್ಯ ಮತ್ತು ನೈಋತ್ಯ ರಸ್ತೆ ಸಾರಿಗೆಗೆ ಸುಮಾರು 15 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಮಂಗಳೂರಿನಲ್ಲಿ ಕೆಎಸ್‍ಆರ್‍ಟಿಸಿಯ ಸ್ಲೀಪರ್ ಕೋಚ್ ಬಸ್‍ಗೆ ಕಲ್ಲು ತೂರಾಟ ನಡೆಸಿದರೂ ಬಿಟ್ಟರೆ ಬೇರೆಲ್ಲೂ ಮಧ್ಯಾಹ್ನದವರೆಗೆ ಅಂತಹ ಘಟನೆಗಳು ನಡೆದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಡಿಪೋಗಳಲ್ಲೂ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.

ರಾತ್ರಿ ವಿವಿಧ ಕಡೆಗಳಿಂದ ಹೊರಟಿರುವ ಬಸ್ ನಿಗದಿತ ಸ್ಥಳಕ್ಕೆ ತಲುಪಿದ ನಂತರ ಪ್ರಯಾಣಿಕರನ್ನು ಇಳಿಸಿ ನೇರವಾಗಿ ಆಯಾ ಘಟಕಗಳಿಗೆ ತೆರಳುತ್ತಿದೆ. ಸಿಬ್ಬಂದಿಗಳು ಹಾಜರಾದರೂ ಕೂಡ ಕೆಲವೆಡೆ ಬಸ್‍ಗಳು ರಸ್ತೆಗಿಳಿಯಲಿಲ್ಲ. ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಿಗೂ ಯಾವುದೇ ಬಸ್ ಸೇವೆಯೂ ಕೂಡ ಆರಂಭಿಸಿಲ್ಲ. ಮುಂಗಡ ಬುಕಿಂಗ್ ಕೂಡ ರದ್ದು ಮಾಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

# ‘ಭಾರತ್ ಬಂದ್’ ದಿನವೇ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ ದರ
ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ‘ಭಾರತ ಬಂದ್’ ಗೆ ಕರೆ ನೀಡಿದ್ದು, ಇದರ ಮಧ್ಯೆ ಕಳೆದ ಹಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್-ಡೀಸೆಲ್ ದರ ಇಂದು ಕೊಂಚಮಟ್ಟಿಗೆ ಇಳಿಕೆ ಕಂಡಿದೆ.  ಬೆಂಗಳೂರಿನಲ್ಲಿ ಪೆಟ್ರೋಲ್ ದರ ಇಂದು 43 ಪೈಸೆಯಷ್ಟು ಇಳಿಕೆ ಕಂಡಿದ್ದು, ಪ್ರತಿ ಲೀಟರ್ ಗೆ 82.69 ರೂಪಾಯಿಗಳಾಗಿದೆ. ಅದೇ ರೀತಿ ಡೀಸೆಲ್ ಬೆಲೆಯಲ್ಲಿ 6 ಪೈಸೆಯಷ್ಟು ಕಡಿಮೆಯಾಗಿದ್ದು, ಪ್ರತಿ ಲೀಟರ್ ಗೆ 74.47 ರೂಪಾಯಿಗಳಾಗಿದೆ.  ಕಳೆದ ಹಲವು ದಿನಗಳ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಹೋಲಿಸಿದರೆ ಇಂದಿನ ಇಳಿಕೆ ನಗಣ್ಯವಾಗಿದ್ದು, ಸಾರ್ವಜನಿಕರು ಪೆಟ್ರೋಲ್-ಡೀಸೆಲ್ ಬೆಲೆ ಗಣನೀಯವಾಗಿ ಇಳಿಕೆ ಕಾಣಲೆಂದು ಆಗ್ರಹಿಸುತ್ತಿದ್ದಾರೆ.

# ಯಾವ ಯಾವ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ತೈಲ ಬೆಲೆ ಏರಿಕೆ ವಿರುದ್ಧ ಇಂದು ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಕರೆ ಕೊಟ್ಟಿದ್ದು, ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಶಿಕ್ಷಣಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಆದರೆ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಣೆಯಾಗಿಲ್ಲ.  ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ತುಮಕೂರು, ಹಾಸನ, ಶಿವಮೊಗ್ಗ, ಯಾದಗಿರಿ, ಮಂಡ್ಯ, ದಾವಣಗೆರೆ, ಕೊಪ್ಪಳ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಚಾಮರಾಜನಗರ, ರಾಯಚೂರು, ವಿಜಯಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೊಡಗು ಮತ್ತು ಬೀದರ್ ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ.

Facebook Comments

Sri Raghav

Admin