ಭಾರತ್ ಬಂದ್ : ಪೊಲೀಸರ ಜೊತೆ ಪ್ರತಿಭಟನಾಕಾರರ ಮಾತಿನ ಚಕಮಕಿ, ಕಲ್ಲುತೂರಾಟ, ಟೈರ್’ ಗೆ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Protest--011

ಬೆಂಗಳೂರು, ಸೆ.10-ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಪೊಲೀಸರೊಂದಿಗೆ ಪ್ರತಿಭಟನಾಕಾರರ ಮಾತಿನ ಚಕಮಕಿ, ಬಸ್‍ಗಳ ಮೇಲೆ ಕಲ್ಲುತೂರಾಟ, ರಸ್ತೆತಡೆ, ಟೈರ್‍ಗಳಿಗೆ ಬೆಂಕಿ ಹಚ್ಚಿರುವುದು, ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ, ಹೊಟೇಲ್‍ಗಳ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಇಂದು ನಡೆದಿವೆ.ಕೋಲಾರ ಜಿಲ್ಲೆ ಮಾಲೂರಿನಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ದುಷ್ಕರ್ಮಿಗಳು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ತೆರಳುತ್ತಿದ್ದ ವೇಳೆ ಅಂಗಡಿ ಮುಚ್ಚಿ ಪ್ರತಿಭಟನೆಗೆ ಸಹಕರಿಸದ ಕೆಲವು ಅಂಗಡಿಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರಿಂದ ಬಸ್‍ನ ಮುಂಭಾಗದ ಗಾಜು ಒಡೆದು ಹೋಗಿದೆ.

ಯಾದಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಅಂಗಡಿ ಮುಚ್ಚಿ ಬಂದ್‍ಗೆ ಸಹಕರಿಸದ ವರ್ತಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಖಾಸಗಿ ಬಸ್ಸೊಂದರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರಿಂದ ಬಸ್‍ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾದ ಕರವೇಯ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಟೈರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಮುಂದಾದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಉಡುಪಿ ಜಿಲ್ಲೆಯ ಬನ್ನಂಜೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮೋದಿ ಪರ-ವಿರೋಧದ ಘೋಷಣೆಗಳು ಮೊಳಗಿದ ವೇಳೆ ಮಾತಿನ ಸಂಘರ್ಷ ವಿಕೋಪಕ್ಕೆ ತಿರುಗಿದ ಸಂದರ್ಭವನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಈ ವೇಳೆ ಹಲವರಿಗೆ ಗಾಯಗಳಾಗಿವೆ.

ಬಂಟ್ವಾಳ ತಾಲೂಕಿನ ಬೋಳಂಗಡಿ ಬಳಿ ಸ್ಥಳೀಯ ಶಾಸಕ ರಾಜೇಶ್‍ನಾಯಕ್ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಶಾಸಕರು ಬಂಟ್ವಾಳದಿಂದ ಕಲ್ಲಡ್ಕಕ್ಕೆ ತೆರಳುತ್ತಿದ್ದ ವೇಳೆ ಕಿಡಿಗೇಡಿಗಳು ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಘಟನೆ ಬಗ್ಗೆ ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಖಂಡಿಸಿ ನಾಳೆ ಬಂಟ್ವಾಳ ಬಂದ್ ಮಾಡುವುದಾಗಿ ಬಿಜೆಪಿ ನಾಯಕ ಹರಿಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ಬಂದ್ ವಿರೋಧಿಸಿದ್ದಕ್ಕೆ ದಾವಣಗೆರೆಯಲ್ಲಿ ಅಂಗಡಿ ಮುಂದೆ ನಿಂತಿದ್ದ ಕಾರಿನ ಗಾಜನ್ನು ಒಡೆದು ಹಾಕಲಾಗಿದೆ.   ಒಟ್ಟಾರೆ ಬಹುತೇಕ ಕಡೆ ಬಂದ್ ಶಾಂತಿಯುತವಾಗಿ ನಡೆದಿದ್ದರೂ ಅಲ್ಲಲ್ಲಿ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿರುವುದು, ಮಾತಿನ ಚಕಮಕಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಪೊಲೀಸರ ಬಿಗಿಬಂದೋಬಸ್ತ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಈವರೆಗೂ ನಡೆದಿಲ್ಲ.

Facebook Comments

Sri Raghav

Admin