ಪ್ರಧಾನಿ ಮೋದಿ ಭೇಟಿಯಾದ ಸಿಎಂ ಕುಮಾರಸ್ವಾಮಿ, 2000 ಕೋಟಿ ಅನುದಾನಕ್ಕಾಗಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--002

ನವದೆಹಲಿ,ಸೆ.10- ಇತ್ತೀಚೆಗೆ ಉಂಟಾದ ಪ್ರವಾಹ ಹಾಗೂ ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ತತ್‍ಕ್ಷಣವೇ ಕೇಂದ್ರ ಸರ್ಕಾರ 2000 ಕೋಟಿ ರೂ. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ನವದೆಹಲಿಯ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಏಳು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಅಲ್ಲದೆ ಸಕಾಲಕ್ಕೆ ಮಳೆ ಬಾರದ ಕಾರಣ 86 ತಾಲ್ಲೂಕುಗಳು ಬರಗಾಲಕ್ಕೆ ಸಿಲುಕಿವೆ ಎಂದು ಹೇಳಿದರು.  ಒಟ್ಟು ಎಂಟು ಸಾವಿರ ಕೋಟಿ ನಷ್ಟವಾಗಿದ್ದು,ಕೇಂದ್ರ ಸರ್ಕಾರ ಕೂಡಲೇ ಪರಿಹಾರದ ರೂಪದಲ್ಲಿ 2000 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು. ಪ್ರವಾಹ ಪೀಡಿತ ಹಾಗೂ ಬರ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಲು ಕೇಂದ್ರದಿಂದ ತಂಡವನ್ನು ಕಳುಹಿಸಿಕೊಡಬೇಕೆಂದು ಕೋರಿದರು.

ನಮ್ಮ ಮನವಿಗೆ ಪ್ರಧಾನಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯಕ್ಕೆ ಅಗತ್ಯವಿರುವ ಆರ್ಥಿಕ ನೆರವು ಹಾಗೂ ಕೂಡಲೇ ಎರಡು ಅಧ್ಯಯನ ತಂಡಗಳನ್ನು ಕಳುಹಿಸಿಕೊಡುವ ಆಶ್ವಾಸನೆ ನೀಡಿದ್ದು, ಕೇಂದ್ರದಿಂದ ನಮಗೆ ನೆರವು ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಆಸ್ತಿಪಾಸ್ತಿ, ಮನೆಮಠ, ಬೆಳೆದು ನಿಂತ ಬೆಳೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಇದನ್ನು ಪ್ರಧಾನಿಯವರಿಗೆ ಮನವರಿಕೆ ಮಾಡಿದ್ದೇವೆ.

Kumaraswamy--0

ಆಗಸ್ಟ್ 2ನೇ ವಾರದಲ್ಲಿ ಶತಮಾನದಲ್ಲೇ ಕಂಡರಿಯದ ಮಳೆ ಸುರಿದು ಅಪಾರ ನಷ್ಟವಾಗಿದೆ. ಈ ಜಿಲ್ಲೆಗಳಲ್ಲಿ ಒಟ್ಟು 3705.87 ನಷ್ಟವಾಗಿದೆ. 65 ಮಂದಿ ಪ್ರಾಣ ಕಳೆದುಕೊಂಡಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಜನರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು ನಮ್ಮ ಕರ್ತವ್ಯ ಎಂದರು.30 ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ. 176 ತಾಲ್ಲೂಕುಗಳ ಪೈಕಿ 23 ತಾಲ್ಲೂಕುಗಳಲ್ಲಿ ಪ್ರವಾಹ ಸಂಭವಿಸಿದೆ.

ನಮಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಾದರೂ ಸರಿಯೇ ಇಲ್ಲವೇ ಯಾವುದೇ ರೀತಿಯಲ್ಲಾದರೂ ಆರ್ಥಿಕ ನೆರವು ನೀಡಬೇಕು. ಪ್ರಧಾನಿಯವರು ನಮ್ಮ ಮನವಿಯನ್ನು ಸಕಾರಾತ್ಮಕವಾಗಿ ಆಲಿಸಿದ್ದಾರೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಾಜ್ಯ ಸರ್ಕಾರ ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ 49 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ನಮ್ಮ ಜೊತೆ ಕೈ ಜೋಡಿಸಿದರೆ ಎಲ್ಲವೂ ಕಳೆದುಕೊಂಡಿರುವ ಸಂತ್ರಸ್ತರಿಗೆ ನೆರವು ಒದಗಿಸಲು ಸಾಧ್ಯವಾಗುತ್ತದೆ ಎಂದರು.

ಇನ್ನು ರಾಜ್ಯದ 17 ಜಿಲ್ಲೆಗಳ 86 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದೆ. ಮಳೆಗಾಲ ಆರಂಭವಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಸರಾಸರಿಗಿಂತ ಮಳೆಯಾಗಿಲ್ಲ. ಇಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರದ ನೆರವು ಅಗತ್ಯವಿದೆ. ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಪ್ರಧಾನಿಗೆ ಮನವಿ ಮಾಡಿದ್ದೇವೆ. ನಮಗೆ ಪ್ರಧಾನಿಯವರಿಂದ ಸೂಕ್ತ ಭರವಸೆ ಸಿಕ್ಕಿರುವುದರಿಂದ ರಾಜ್ಯಕ್ಕೆ ಅನುದಾನ ಸಿಗಲಿದೆ ಎಂಬ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಪ್ರವಾಹ ಪೀಡಿತ ಹಾಗೂ ಬರಗಾಲದಿಂದ ತತ್ತರಿಸಿರುವ ಸಂತ್ರಸ್ತರಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಡಿ ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದೇವೆ. ಇದಕ್ಕೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರದಿಂದ ನಮಗೆ ಕನಿಷ್ಟ 2000 ಕೋಟಿ ಹಣ ಸಿಗುವ ವಿಶ್ವಾಸವಿದೆ.

ಅಲ್ಲದೆ ಎರಡು ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದ್ದು, ಕೇಂದ್ರಕ್ಕೆ ವರದಿ ನೀಡಲಿದೆ. ಪ್ರಧಾನಿಯವರು ನಮ್ಮ ಎಲ್ಲ ಬೇಡಿಕೆಯನ್ನು ಶಾಂತಿಯಿಂದ ಆಲಿಸಿದ್ದಾರೆ. ಕರ್ನಾಟಕಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು. ನಿಯೋಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಕೃಷ್ಣಭರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin