ಮೋದಿ ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದ್ದಾರೆ ; ಗುಂಡೂರಾವ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gundurav

ಬೆಂಗಳೂರು, ಸೆ.10- ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದು, ನಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾರೆ. ಇದರಿಂದ ದೇಶದಲ್ಲಿ ನಾನಾ ಸಮಸ್ಯೆಗಳು ತಲೆದೋರುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತೈಲ ಬೆಲೆ ಏರಿಕೆ ವಿರೋಧಿಸಿ ನಗರದಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನೋಟ್ ಅಮಾನೀಕರಣ ಮಾಡಿ ಸಂಕಷ್ಟ ತಂದಿಟ್ಟರು. ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಪ್ರತಿ ದಿನ ಏರಿಕೆ ಮಾಡಿ ಜನಸಾಮಾನ್ಯರಿಗೆ ಬರೆ ಎಳೆಯುತ್ತಿದ್ದಾರೆ. ತೈಲ ಬೆಲೆ ಏರಿಕೆಗೆ ಕಾರಣರಾದವರನ್ನು ನೇಣಿಗೆ ಹಾಕಿ ಎಂದು ಪ್ರಧಾನಿ ಆಗುವ ಮುನ್ನ ಮೋದಿ ಗುಡುಗಿದ್ದರು. ಆದರೆ, ಈಗ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಜನಸಾಮಾನ್ಯರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿ ಕೂಡ ಪ್ರಧಾನಿಯವರಿಗಿಲ್ಲ. ಇಂತಹ ಪ್ರಧಾನಿಯನ್ನು ಇಟ್ಟುಕೊಂಡು ನಾವು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ದೇಶದಲ್ಲಿ ಬೇರೆ ರೀತಿಯ ದರಗಳು ಏರಿಕೆಯಾಗುತ್ತವೆ. ದವಸ ಧಾನ್ಯ, ತರಕಾರಿ, ಪ್ರಯಾಣ ದರ ಕೂಡ ಏರಿಕೆಯಾಗುತ್ತವೆ. ಇವೆಲ್ಲವೂ ತೈಲ ಬೆಲೆ ಏರಿಕೆಯಿಂದ ಸಂಭವಿಸುತ್ತಿದ್ದರೂ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.

ಮತ್ತೊಮ್ಮೆ ಅಧಿಕಾರ ನೀಡಿ, ತೈಲ ಬೆಲೆ ಕಡಿಮೆ ಮಾಡುತ್ತೇನೆ ಎಂದು ಪ್ರಧಾನಿ ನಿನ್ನೆ ಹೇಳಿದ್ದಾರೆ. ನಾಲ್ಕೂವರೆ ವರ್ಷ ನೀವು ಮಾಡಿರುವುದು ಏನು ? ಮನುಷ್ಯತ್ವವೇ ಇಲ್ಲದಂತೆ ಪ್ರಧಾನಿ ವರ್ತಿಸುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಆಡಳಿತ ಮಾಡುತ್ತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ವ್ಯಕ್ತಿ ಎಂದರೆ ಅದು ಮೋದಿ ಅವರು ಎಂದು ದಿನೇಶ್‍ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಮುನಿರತ್ನ ಮಾತನಾಡಿ, ನರೇಂದ್ರ ಹೆಸರಿನಲ್ಲೇ ದರಿದ್ರ ಇದೆ. ಮೋದಿಯಿಂದಾಗಿ ದೇಶಕ್ಕೆ ದರಿದ್ರ ಬಂದಿದೆ. ತೈಲ ಬೆಲೆ ಏರಿಕೆಯಿಂದ ಬಡವರಿಗೆ ಉಳಿಗಾಲವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಜಮೀರ್ ಅಹಮ್ಮದ್‍ಖಾನ್, ಶಾಸಕರಾದ ಎಚ್.ಎಂ.ರೇವಣ್ಣ, ಲಕ್ಷ್ಮೀಹೆಬ್ಬಾಳ್ಕರ್, ಎನ್.ಎ.ಹ್ಯಾರಿಸ್, ಸಿಪಿಐನ ಮಾಜಿ ಶಾಸಕ ಜಿ.ವಿ.ಶಿವರಾಮರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin