ಕಣಿವೆಗೆ ಸರ್ಕಾರಿ ಬಸ್ ಉರುಳಿ ಬಿದ್ದು 34 ಮಂದಿ ಪ್ರಯಾಣಿಕರು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Bus-Accident-in-Hydrabad

ಹೈದರಾಬಾದ್, ಸೆ.11-ಸರ್ಕಾರಿ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು 34 ಮಂದಿ ಪ್ರಯಾಣಿಕರು ಮೃತಪಟ್ಟು, ಇತರೆ 20 ಮಂದಿ ತೀವ್ರ ಗಾಯಗೊಂಡಿರುವ ಭೀಕರ ದುರಂತ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಆಂಧ್ರಪ್ರದೇಶದ ರಾಜ್ಯ ರಸ್ತೆ ಸಾರಿಗೆ ನಿಗಮ(ಎಪಿಎಸ್‍ಆರ್‍ಟಿಸಿ)ಕ್ಕೆ ಸೇರಿದ ಬಸ್ ಕರೀಂನಗರ ಬಳಿ ಕೊಂಡುಗಟ್ಟು ಸಮೀಪ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿತ್ತು. ಈ ಘೋರ ದುರ್ಘಟನೆಯಲ್ಲಿ 34 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಬಸ್ ಕೊಂಡಗಟ್ಟುವಿನಿಂದ ಜಗ್ತಿಯಾಲ್‍ಗೆ ತೆರಳುತ್ತಿತ್ತು. ಶನಿವಾರಪೇಟ್ ಗ್ರಾಮದ ಬಳಿ ಘಾಟ್ ರಸ್ತೆಯಲ್ಲಿ ಈ ದುರ್ದೈವಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿತ್ತು.
ಇಂದು ಬೆಳಗ್ಗೆ 11.45ರಲ್ಲಿ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಗ್ತಿಯಾಲ್ ಜಿಲ್ಲಾ ಕಲೆಕ್ಟರ್ ಶರತ್ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತೆಲಂಗಾಣದಲ್ಲಿ ಈ ವರ್ಷ ಸಂಭವಿಸಿದ ಅತ್ಯಂತ ಭೀಕರ ರಸ್ತೆ ಅಪಘಾತ ಇದಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರ ಸಂಬಂಧಿಕರು ಸ್ಥಳಕ್ಕೆ ಧಾವಿಸಿ ರೋದಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Facebook Comments

Sri Raghav

Admin