ಖಾಸಗಿ ಸಂಘ ಸಂಸ್ಥೆಗಳಿಗೆ ಬೇಕಾಬಿಟ್ಟಿ ಬಿಡುಗಡೆಯಾಗುತ್ತಿರುವ ಅನುದಾನಕ್ಕೆ ಸಿಎಂ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

kumaraswamy

ಬೆಂಗಳೂರು, ಸೆ.11-ಬಿಬಿಎಂಪಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಖಾಸಗಿ ಸಂಘ ಸಂಸ್ಥೆಗಳಿಗೆ ಬೇಕಾಬಿಟ್ಟಿ ಅನುದಾನ ಬಿಡುಗಡೆ ಮಾಡುತ್ತಿರುವ ನಡವಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬ್ರೇಕ್ ಹಾಕಿದ್ದು, ಲಯನ್ಸ್ ಸಂಸ್ಥೆಗೆ ಬಿಡುಗಡೆಯಾಗಬೇಕಿದ್ದ 50 ಲಕ್ಷ ರೂ.ಗೆ ತಡೆ ನೀಡಿದ್ದಾರೆ. ಪಾಲಿಕೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಪಾಲಿಕೆಯ ನೌಕರರು ಮತ್ತು ಗುತ್ತಿಗೆದಾರರಿಗೆ ಹಣ ಇನ್ನೂ ಬಿಡುಗಡೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಬಾರದು ಎಂದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಾಲಿಕೆಯ ಅನುದಾನ ಬಿಡುಗಡೆ ಮಾಡುವ ಕೆಲಸಕ್ಕೆ ತಣ್ಣೀರೆರಚಿದ್ದಾರೆ.

ಬೆಂಗಳೂರಿನ ಲಯನ್ಸ್ ಕ್ಲಬ್ ವೆಸ್ಟ್ ಟ್ರಸ್ಟ್‍ಗೆ 50 ಲಕ್ಷ ರೂ. ಸಹಾಯಧನವನ್ನು ಬಿಡುಗಡೆ ಮಾಡಲು ಇತ್ತೀಚೆಗೆ ನಡೆದ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಈ ಸಂಸ್ಥೆ ರಾಜ್ಯ ಸರ್ಕಾರದಿಂದಲೂ ಸಹಾಯಧನ ಪಡೆದಿತ್ತು. ಈ ಬಗ್ಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದು, ಇದೀಗ ಹಣ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದಾರೆ. ಲಯನ್ಸ್ ಕ್ಲಬ್ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ, ಸವಲತ್ತುಗಳನ್ನು ಪಡೆದು ಸಮಾಜ ಸೇವೆಯ ಮುಖವಾಡ ಧರಿಸಿಕೊಂಡಿದೆ.

ರಾಜ್ಯದ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಿರುವುದರಿಂದ ಮತ್ತು ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾಗಿರುವುದರಿಂದ ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇದೆ. ಪಾಲಿಕೆಯ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಧ್ಯಕ್ಷ ಎಸ್.ಅಮರೇಶ್ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜಾಜಿನಗರದ ಕ್ರೀಡಾ ಸಾಂಸ್ಕøತಿಕ ಸಂಘಕ್ಕೆ 20 ಸಾವಿರ ರೂ.ಗಳ ಸಹಾಯಧನವನ್ನು ನೀಡಲು ಪಾಲಿಕೆ ತೀರ್ಮಾನಿಸಿದೆ. ಈ ಅನುದಾನವನ್ನು ಕೂಡ ರದ್ದುಗೊಳಿಸಬೇಕು ಎಂದು ಅಮರೇಶ್ ಒತ್ತಾಯಿಸಿದ್ದಾರೆ.

Facebook Comments