ಡಿಸ್ಕೌಂಟ್ ಮೈಸೂರು ಸಿಲ್ಕ್ ಸೀರೆಗಾಗಿ ನಾರಿಯರ ನೂಕು ನುಗ್ಗಲು..!

ಈ ಸುದ್ದಿಯನ್ನು ಶೇರ್ ಮಾಡಿ

ASaree-01

ಮೈಸೂರು, ಸೆ.11- ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ 10 ಸಾವಿರ ರೂ. ಬೆಲೆಯ ಮೈಸೂರು ಸಿಲ್ಕ್ ಸೀರೆ 4500ರೂ.ಗೆ ರಿಯಾಯಿತಿ ದರದಲ್ಲಿ ಪಡೆಯಲು ಬೆಳ್ಳಂ ಬೆಳಗ್ಗೆ ನಾರಿಯರು ಸಾಲು ನಿಂತಿದ್ದಾರೆ. ನಗರದ ಚಾಮರಾಜೇಂದ್ರ ಮೃಗಾಲಯದ ಸಮೀಪ ಇರುವ ಕೆಎಸ್‍ಐಸಿ ಮಳಿಗೆ ಮುಂದೆ ಬೆಳಗಿನಿಂದಲೇ ನಾರಿಯರು ಸೀರೆಗಾಗಿ ಸಾಲುಗಟ್ಟಿ ನಿಂತಿದ್ದಾರೆ.

ಭಾರಿ ಉದ್ದದ ಸಾಲು ಇದ್ದ ಕಾರಣ ಮಳಿಗೆಯ ವ್ಯವಸ್ಥಾಪಕರು ಬಂದು ಇಂದು ಮೂರು ಸಾವಿರ ಸೀರೆಗಳನ್ನು ಮಾತ್ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇಲ್ಲಿ ಬಂದಿರುವುದರಿಂದ ಲಾಟರಿ ಮೂಲಕ ಸೀರೆ ವಿತರಿಸಲಾಗುವುದು ಎಂದು ಪ್ರಕಟಿಸಿದರು.

ನಂತರ ಸಾಲಿನಲ್ಲಿ ನಿಂತಿದ್ದ ಮಹಿಳೆಯರಿಗೆ ಟೋಕನ್ ವಿತರಿಸಲಾಯಿತು. ಟೋಕನ್‍ಗಳನ್ನು ಡ್ರಾ ಎತ್ತುವ ಮೂಲಕ ಸೀರೆ ನೀಡಲಾಗುತ್ತದೆ ಎಂದು ಘೋಷಿಸಲಾಯಿತು. ಟೋಕನ್ ಪಡೆಯಲು ನೂಕು ನುಗ್ಗಲು ಉಂಟಾಗಿ ಮಹಿಳಾ ಮಣಿಗಳು ಒಬ್ಬನ್ನೊಬ್ಬರು ಎಳೆದಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಬಂದು ಪರಿಸ್ಥಿತಿ ನಿಭಾಯಿಸಿದರು.

10 ಸಾವಿರ ರೂ. ಬೆಲೆಯ ಮೈಸೂರು ಸಿಲ್ಕ್ ಸೀರೆ 4500 ರೂ.ಗೆ ಸಿಗುವುದರಿಂದ ನಾರಿಯರು ಅತಿ ಹೆಚ್ಚಾಗಿ ಬಂದಿದ್ದರಿಂದ ಗೊಂದಲ ಉಂಟಾಯಿತು. ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರು ಸಿಲ್ಕ್ ಸೀರೆಯನ್ನು ರಿಯಾಯಿತಿ ದರದಲ್ಲಿ ವಿತರಿಸುವುದಾಗಿ ಹೇಳಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆ ಎದುರಾದುದರಿಂದ ಇದನ್ನು ಸ್ಥಗಿತಗೊಳಿಸಲಾಗಿತ್ತು.  ಈಗ ಗೌರಿ ಹಬ್ಬಕ್ಕೆ ಸೀರೆ ನೀಡುವುದಾಗಿ ಹೇಳಿರುವುದರಿಂದ ಇಂದು ಮೈಸೂರು ಸಿಲ್ಕ್ ಸೀರೆಗಾಗಿ ನಾರಿಯರು ದೌಡಾಯಿಸಿದ್ದಾರೆ.

Facebook Comments

Sri Raghav

Admin