ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್’ಗೆ ಪತ್ನಿ ವಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Pakistan

ಇಸ್ಲಾಮಾಬಾದ್. ಸೆ.11 : ಭ್ರಷ್ಟಾಚಾರದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಜೈಲುವಾಸ ಅನುಭವಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ರ ಪತ್ನಿ ಬೇಗಂ ಕುಲ್ಸೂಮ್ (68) ಮಂಗಳವಾರದಂದು ಲಂಡನ್ ನಲ್ಲಿ ನಿಧನರಾಗಿದ್ದಾರೆ.  ಬೇಗಂ ಕುಲ್ಸೂಮ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. 2014ರ ಜೂನ್ ನಿಂದ ಲಂಡನ್ ನಲ್ಲಿರುವ ಹಾರ್ಲೆ ಸ್ಟ್ರೀಟ್ ಕ್ಲಿನಿಕ್ ನಲ್ಲಿ ಕುಲ್ಸೂಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಸಾಗಿದ್ದರಿಂದ ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಗಿತ್ತು ಎಂದು ಜಿಯೋ ಟಿವಿ ವರದಿ ಮಾಡಿದೆ. 68 ವರ್ಷದ ಕುಲ್ಸೂಮ್ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು 2017ರ ಆಗಸ್ಟ್ ನಲ್ಲಿ ಪತ್ತೆಯಾಗಿತ್ತು. ನವಾಜ್ ಷರೀಫ್ ಹಾಗೂ ಕುಲ್ಸೂಮ್ ಅವರ ವಿವಾಹ 1971ರಲ್ಲಿ ಆಗಿತ್ತು.  ಸದ್ಯ ನವಾಜ್ ಷರೀಪ್ ಹಾಗೂ ಅವರ ಮಗಳು ಮರ್ಯಾಮ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಬೇಗಂ ಕುಲ್ಸೂಮ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನವಾಜ್ ಷರೀಫ್ ಹಾಗೂ ಮರ್ಯಾಮ್ ಗೆ ಪರೋಲ್ ಸಿಗುವ ಸಾಧ್ಯತೆ ಇದೆ.

ಕಳೆದ ವರ್ಷ ಜುಲೈನಲ್ಲಿ ಭ್ರಷ್ಟಾಚಾರ ಬಯಲುಗೊಂಡು ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದ ನಂತರ, 68 ವರ್ಷದ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣಗಳು ಆರಂಭಗೊಂಡವು. ಕಳೆದ ವರ್ಷ ನವಾಜ್ ಶರೀಫ್ ಪ್ರಧಾನಮಂತ್ರಿ ಹುದ್ದೆಯಲ್ಲಿರುವಾಗ ನವಾಜ್ ಷರೀಫ್ ಅವರು ಅಕ್ರಮ ಸಂಪಾದನೆ ಮತ್ತು ತೆರಿಗೆ ವಂಚನೆಯಿಂದ ಗಳಿಸಿದ ಕಪ್ಪು ಹಣವನ್ನು ಅಂತರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಹಾಗೂ ವಿದೇಶಗಳಲ್ಲಿ ಹೂಡಿಕೆ ಮಾಡಿದವರ ಪಟ್ಟಿಯನ್ನು ಪನಾಮ ಪೇಪರ್ಸ್ ಲೀಕ್ ಮಾಡಿತ್ತು. ಲಂಡನ್ ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಹಾಗೂ ಪುತ್ರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

# ಪನಾಮಾ ಪೇಪರ್ಸ್ ಹಗರಣ ಅಂದರೆ ಏನು,?

ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ. ಅದು ಬಹಿರಂಗ ಪಡಿಸಿದ್ದು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳು. ಅವೇ ಪನಾಮ ಪೇಪರ್ಸ್. ಈ ಎಲ್ಲ ದಾಖಲೆಗಳನ್ನು ಅಪರಿಚಿತ ಮೂಲಗಳಿಂದ ಜರ್ಮನ್ ನ ಪತ್ರಿಕೆಯೊಂದು ಪಡೆಯಿತು. ಆ ನಂತರ ಅಂತರರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದ ಜತೆಗೆ ಹಂಚಿಕೊಂಡಿತು. ಆ ಒಕ್ಕೂಟವು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಜತೆಗೆ ಮಾಹಿತಿಯನ್ನು ಹಂಚಿಕೊಂಡಿತು. ಅಂದಹಾಗೆ ಆ ದಾಖಲೆಗಳಲ್ಲಿ ಏನಿದ್ದವು ಎಂಬುದು ಪ್ರಶ್ನೆ.

ವಿದೇಶಗಳಲ್ಲಿರುವ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹೇಗೆ ಹಣ ಹೂಡಿಕೆ ಮಾಡಿದ್ದಾರೆ, ಯಾರ್ಯಾರು ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಅದರಲ್ಲಿತ್ತು. ನೂರಾ ನಲವತ್ಮೂರು ರಾಜಕಾರಣಿಗಳು, ಅದರಲ್ಲಿ ಹನ್ನೆರಡು ರಾಷ್ಟ್ರೀಯ ನಾಯಕರ ಹೆಸರು ಒಳಗೊಂಡಿದ್ದವು. ಅವರ ಕುಟುಂಬದವರು, ನಿಕಟವರ್ತಿಗಳು ಜಗತ್ತಿನಾದ್ಯಂತ ಇರುವ  ತೆರಿಗೆ ಸ್ವರ್ಗ ಎನಿಸಿದ ದೇಶಗಳನ್ನು ಹೇಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿವರಗಳಿದ್ದವು.

Facebook Comments

Sri Raghav

Admin