ಏಡ್ಸ್ ಬಾಧಿತರಿಗೆ ಉದ್ಯೋಗ ನಿರಾಕರಿಸಿದರೆ 2 ವರ್ಷ ಜೈಲು..!

ಈ ಸುದ್ದಿಯನ್ನು ಶೇರ್ ಮಾಡಿ

Aids--01
ನವದೆಹೆಲಿ, ಸೆ.11 (ಪಿಟಿಐ)- ಎಚ್‍ಐವಿ/ಏಡ್ಸ್ ಪೀಡಿತರ ಹಿತರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಉದ್ಯೋಗ ಸೇರಿದಂತೆ ಸಾಮಾಜಿಕ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೊಳಿಸಿದೆ.  ಹೊಸ ಕಾನೂನಿನ ಅನ್ವಯ ಈ ರೋಗ ಬಾಧಿತರಿಗೆ ಉದ್ಯೋಗ ನಿರಾಕರಿಸುವಂತಿಲ್ಲ ಹಾಗೂ ಕೆಲಸದಿಂದ ವಜಾಗೊಳಿಸುವಂತಿಲ್ಲ. ಈ ನಿಯಮವನ್ನು ಯಾರಾದರೂ ಉಲ್ಲಂಘಿಸಿದಲ್ಲಿ ಅಂಥವರಿಗೆ 3 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ.ಗಳ ತನಕ ಜುಲ್ಮಾನೆ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶವಿದೆ.

ಹ್ಯುಮನ್ ಇಮ್ಯೂನೋಡಿಫಿಷಿಯನ್ಸಿ ವೈರಸ್(ಎಚ್‍ಐವಿ) ಹಾಗೂ ಅಕ್ವೈರ್ಡ್ ಇಮ್ಯೂನ್ ಡಿಫಿಶಿಯನ್ಸಿ ಸಿಂಡ್ರೋಮ್(ಏಡ್ಸ್)(ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ-2017ನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ.  ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಕಾಯ್ದೆಗೆ ಅನುಮೋದನೆ ನೀಡಲಾಗಿತ್ತು. ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾಗಿದ್ದಾಗ ಈ ಕಾಯ್ದೆಗೆ ಅಂಕಿತ ಹಾಕಿದ್ದರು. ಈ ಅಧಿನಿಯಮ ಜಾರಿಯಲ್ಲಿತ್ತಾದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲ. ಈಗ ಆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಚ್‍ಐವಿ/ಏಡ್ಸ್ ಪೀಡಿತರ ಹಿತರಕ್ಷಣೆಗಾಗಿಕೇಂದ್ರ ದೃಢ ಹೆಜ್ಜೆ ಇಟ್ಟಿದೆ.

ಈ ರೋಗ ಪೀಡಿತ ಆಸ್ತಿಪಾಸ್ತಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಹೊಸ ಕಾಯ್ದೆಯಲ್ಲಿ ಕೆಲವು ಪ್ರಮುಖ ಕಾನೂನುಗಳನ್ನು ಸೇರಿಸಲಾಗಿದೆ.  ಈ ರೋಗದಿಂದ ಜರ್ಜರಿತವಾಗಿರುವ ಮಂದಿಯ ವಿರುದ್ಧ ಅಪಪ್ರಚಾರ ಮಾಡುವುದು, ಅವರ ಎಚ್‍ಐವಿ ಪಾಸಿಟಿವ್ ಸ್ಥಿತಿಯನ್ನು ದುರುದ್ದೇಶಕ್ಕಾಗಿ ಬಹಿರಂಗಗೊಳಿಸುವುದು, ಅವರಿಗೆ ಉದ್ಯೋಗ ನಿರಾಕರಿಸುವುದು, ರೋಗ ಪೀಡಿತರೆಂಬ ಕಾರಣಕ್ಕಾಗಿ ಕೆಲಸದಿಂದ ತೆಗೆದು ಹಾಕುವುದು, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಿಸುವುದು, ಅವರಿಗೆ ವೈದ್ಯಕೀಯ ಚಿಕಿತ್ಸೆ ಬಗ್ಗೆ ನಿರ್ಲಕ್ಷ್ಯ ವಹಿಸುವುದು, ಅವರ ಆಸ್ತಿ-ಪಾಸ್ತಿಗಳಿಗೆ ಧಕ್ಕೆ ಉಂಟುಮಾಡುವುದು ಮೊದಲಾದವು ಈ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧ.

ಇಂಥ ಆರೋಪಗಳು ಸಾಬೀತಾದಲ್ಲಿ ಅಂಥವರಿಗೆ 3 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶವಿದೆ. ಎಚ್‍ಐವಿ/ಏಡ್ಸ್ ಪೀಡಿತರ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ತಡೆಯಲು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin