ಅವ್ಯವಹಾರ ತಡೆಯಲು ಚಾಮುಂಡೇಶ್ವರಿ ದೇವಾಲಯದಲ್ಲಿ ಟಿಕೆಟ್ ವಿತರಣೆಗೆ ಹೊಸ ಸಾಫ್ಟ್ ವೇರ್

ಈ ಸುದ್ದಿಯನ್ನು ಶೇರ್ ಮಾಡಿ

Chamundeshwsri
ಬೆಂಗಳೂರು, ಸೆ.11-ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ನೀಡುವ ಟಿಕೆಟ್ ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಒಪ್ಪಿಕೊಂಡಿರುವ ಮುಜರಾಯಿ ಇಲಾಖೆ, ಟಿಕೆಟ್ ವಿತರಣೆಗೆ ಹೊಸ ಸಾಫ್ಟ್ ವೇರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಕ್ಕೆ ಮುಂದಾಗಿದೆ.

ದೇವಿಯ ದರ್ಶನಕ್ಕೆ ನೀಡುವ ಟಿಕೆಟ್ ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಈ ಸಂಜೆ ವರದಿಗೆ ಸ್ಪಂದಿಸಿರುವ ಮುಜರಾಯಿ ಖಾತೆ ಸಚಿವ ರಾಜಶೇಖರ್ ಬಸವರಾಜ್ ಪಾಟೀಲ್, ತಕ್ಷಣ ಹಿರಿಯ ಅಧಿಕಾರಿಗಳನ್ನು ಕರೆದು ಮಾಹಿತಿ ಕೇಳಿದ್ದಾರೆ. ಮಾತ್ರವಲ್ಲ ಚಾಮುಂಡಿಬೆಟ್ಟಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

ಮೈಸೂರಿನ ಹಿಂದಿನ ಪ್ರಾದೇಶಿಕ ಆಯುಕ್ತರು 2013ರಲ್ಲಿ ಎನ್‍ಐಸಿ ಮೂಲಕ ದೇವಾಲಯಕ್ಕೆ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿ ಟಿಕೆಟ್‍ಗಳು, ಇತರ ಸೇವೆಗಳನ್ನು ಕಂಪ್ಯೂಟರ್ ಮೂಲಕ ಭಕ್ತಾದಿಗಳಿಗೆ ತಲುಪಿಸಲು ಕ್ರಮಕೈಗೊಂಡಿದ್ದರು. ಆದರೆ ಈ ಸಾಫ್ಟ್‍ವೇರ್‍ನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ದೋಷ ಕಂಡು ಬಂದಿತ್ತು. ಆದರೆ ಇದನ್ನೇ ದುರುಪಯೋಗಪಡಿಸಿಕೊಂಡ ಅಲ್ಲಿನ ಗುತ್ತಿಗೆ ಆಧಾರದ ನೌಕರರು ನಕಲಿ ಟಿಕೆಟ್‍ಗಳನ್ನು ವಿತರಿಸಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿ ದೇವಾಲಯಕ್ಕೆ ನೀಡದೆ ವಂಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಭಕ್ತರೊಬ್ಬರು ಇತ್ತೀಚೆಗೆ ದೇವಿಯ ದರ್ಶನಕ್ಕೆ ತೆರಳಿದಾಗ ಅಲ್ಲಿನ ಸಿಬ್ಬಂದಿ ನೀಡಿದ ಟಿಕೆಟ್‍ನಲ್ಲಿ 2008 ಎಂದು ನಮೂದಾಗಿತ್ತು. ಈ ಬಗ್ಗೆ ಅವರು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಅವರು ಹಾರಿಕೆಯ ಉತ್ತರ ನೀಡಿ ಅವರನ್ನು ಸಾಗ ಹಾಕಿದ್ದರು.

ಈ ಸಂಜೆ ಈ ಕುರಿತು ಸಮಗ್ರ ತನಿಖಾ ವರದಿಯನ್ನು ಪ್ರಕಟಿಸಿದ್ದು, ಇದೀಗ ಅದರ ಫಲಶೃತಿ ಎಂಬಂತೆ ಮುಜರಾಯಿ ಸಚಿವರು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಕಳೆದ 15 ದಿನಗಳ ಪ್ರವೇಶ ಟಿಕೆಟ್ ನೀಡುತ್ತಿರುವ ಸ್ಟೇಟ್‍ಮೆಂಟ್‍ಗೂ ನಗದಿಗೂ ವ್ಯತ್ಯಾಸ ಬಂದ ಹಿನ್ನೆಲೆಯಲ್ಲಿ ಕಳೆದ 11 ವರ್ಷಗಳ ಹಿಂದಿನ ಪ್ರತಿ ದಿನದ ಸ್ಟೇಟ್‍ಮೆಂಟ್‍ಗಳನ್ನು ತೆಗೆಸಿ ಪರಿಶೀಲಿಸಿದ್ದಾರೆ. ಆಗ ಭಾರೀ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಕೆಂಡಾಮಂಡಲರಾದ ಸಚಿವರು, ಮೈಸೂರು ಜಿಲ್ಲಾ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಚಾಮುಂಡಿಬೆಟ್ಟದಲ್ಲಿ ಕರೆದಿರುವ ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಇಂದು ಅಥವಾ ನಾಳೆ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದ್ದು, ಅಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಅವ್ಯವಹಾರದ ತನಿಖೆಗೆ ಆದೇಶಿಸಿ, ಇದುವರೆಗೆ ದೇವಸ್ಥಾನಕ್ಕೆ ವಂಚಿಸಲ್ಪಟ್ಟ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡುವ ಸಾಧ್ಯತೆ ಇದೆ.

Facebook Comments

Sri Raghav

Admin