ರಮೇಶ್ ಜಾರಕಿಹೊಳಿ 20 ಮಂದಿ ಶಾಸಕರೊಂದಿಗೆ ಬಿಜೆಪಿ ಸೇರುತ್ತಾರೆ ಎಂಬುದು ಸುಳ್ಳು..!

ಈ ಸುದ್ದಿಯನ್ನು ಶೇರ್ ಮಾಡಿ

Parameshwar
ಬೆಂಗಳೂರು, ಸೆ.11- ಸಚಿವ ರಮೇಶ್‍ಜಾರಕಿಹೊಳಿ ಮತ್ತು ಶಾಸಕ ಸತೀಶ್ ಜಾರಕಿ ಹೊಳಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ. ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ಯಾವುದೇ ಧಕ್ಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಗ್ಗೆ ಸಚಿವ ರಮೇಶ್ ಜಾರಕಿಹೊಳಿ ಅವರ ಜತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರೊಂದಿಗೆ ಮಾತುಕತೆ ನಡೆಸಿದ ಪರಮೇಶ್ವರ್ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮಲ್ಲಿಯಾವುದೇ ಅಸಮಾಧಾನಗಳಿಲ್ಲ. ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸುಖಾಂತ್ಯವಾಗಿ ಮುಗಿದಿದೆ. ಎಲ್ಲವೂ ಬಗೆಹರಿದಿದೆ. ಯಾರೂ ಅಸಮಾಧಾನಗೊಂಡಿಲ್ಲ. ಜಿಲ್ಲೆಯಲ್ಲಿಯ ಸಮಸ್ಯೆಗಳ ಬಗ್ಗೆ ರಮೇಶ್ ಜಾರಕಿಹೊಳಿ ಚರ್ಚೆ ಮಾಡಿದ್ದಾರೆ. ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ವಿಷಯವಾಗಿ ಅವರು ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ರಮೇಶ್ ಜಾರಕಿಹೊಳಿ ಅವರ ಜತೆ 20 ಮಂದಿ ಶಾಸಕರಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು, ಬಿಜೆಪಿಯವರು ದಿನಕ್ಕೊಂದು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಅದು ಯಾವುದೂ ನಿಜವಲ್ಲ. ಸದ್ಯಕ್ಕೆ ಕಾಂಗ್ರೆಸ್‍ನಲ್ಲಿ ಎಲ್ಲವೂ ತಣ್ಣಗಿದೆ. ನಾವೂ ಕೂಡ ಕೂಲ್ ಕೂಲಾಗಿದ್ದೇವೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಪಕ್ಷ ಬಿಡುತ್ತಾರೆ ಎಂಬ ವದಂತಿಯ ಬಗ್ಗೆ ನಾನೇ ಖುದ್ದಾಗಿ ಇಂದು ಅವರ ಬಳಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧವಾಗಿ ನಿನ್ನೆ ಕಾಂಗ್ರೆಸ್ ಕರೆ ನೀಡಿದ್ದ ಬಂದ್‍ನಲ್ಲಿ ಪೊ ಲೀಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿಯವರು ಮಾಡಿರುವ ಆರೋಪ ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರದ ತೈಲ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಬಂದ್ ನಡೆದಿದೆ. ರಾಜ್ಯದಲ್ಲಿ ಪೊ ಲೀಸರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ. ನಮ್ಮ ಪಕ್ಷ ಆಡಳಿತವನ್ನು ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin