ರಾಜ್ಯದ 86 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

RV-Deshapandey

ಬೆಂಗಳೂರು, ಸೆ.11-ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದ 86 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಸಚಿವ ಸಂಪುಟ ಉಪಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವದಿಂದ 86 ತಾಲೂಕುಗಳು ಬರಪೀಡಿತವಾಗಿದ್ದು, 8 ಸಾವಿರ ಕೋಟಿ ರೂ.ಗಳಷ್ಟು ಬೆಳೆ ನಷ್ಟವಾಗಿದೆ ಎಂದರು.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಬರಪೀಡಿತ ಪ್ರದೇಶಗಳಲ್ಲಿ ಜಂಟಿ ಸರ್ವೆ ಮಾಡಿ ನಷ್ಟದ ಪ್ರಮಾಣವನ್ನು ಅಂದಾಜಿಸಲಿವೆ ಎಂದರು.
ಸೆಪ್ಟೆಂಬರ್‍ನಲ್ಲಿ ಕೂಡ ಮಳೆ ಕೊರತೆ ಮುಂದು ವರೆದಿದ್ದು, ಸದ್ಯಕ್ಕೆ ಮಳೆ ಬರುವ ಮುನ್ಸೂಚನೆಗಳಿಲ್ಲ. ಹೀಗಾಗಿಕುಡಿಯುವ ನೀರು, ಜಾನುವಾರುಗಳ ಮೇವಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು. ರಾಜ್ಯದಲ್ಲಿ ಹೊಸದಾಗಿ 50 ತಾಲೂಕುಗಳನ್ನು ಸ್ಥಾಪಿಸಲಾಗಿದ್ದರೂ ಹಳೆಯ ತಾಲೂಕುಗಳ ಆಧಾರದ ಮೇಲೆ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ 23 ಜಿಲ್ಲೆಗಳ 86 ತಾಲೂಕುಗಳು ಸೇರಿವೆ. ಹೊಸಕೋಟೆ, ಚನ್ನಪಟ್ಟಣ, ಕನಕಪುರ, ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕುಗಳು ಸೇರಿದಂತೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮಂಡ್ಯ, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ ಹಾಗೂ ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಿವೆ ಎಂದರು.

ರಾಜ್ಯದ ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡುವ ಗುರಿ ಇತ್ತು . 62.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ಬೆಳೆಯು ಒಣಗುತ್ತಿದೆ ಎಂದು ಹೇಳಿದರು.  ನಿನ್ನೆ ಪ್ರಧಾನಿಯವರಿಗೆ ಬರಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪತ್ರ ಕೊಡಲಾಗಿದೆ. ಸಮೀಕ್ಷೆ ಮುಗಿದ ನಂತರ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.  ಪ್ರಧಾನಿಯಿಂದ ನೆರವಿನ ಹಸ್ತ: ಕೊಡಗು ಸೇರಿದಂತೆ ಪ್ರವಾಹ ಸಂದರ್ಭದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಪ್ರವಾಹದಲ್ಲಿ ಜೀವ ಕಳೆದುಕೊಂಡವರ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಪ್ರಧಾನಿಯವರಿಗೆ ಕಳುಹಿಸಿಕೊಡಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ. ಸೇರಿದಂತೆ 5 ಲಕ್ಷ ಪರಿಹಾರ ರೂ.ಗಳನ್ನು ನೀಡಲಾಗಿದೆ. ಪ್ರಧಾನಿಯವರೂ 2 ಲಕ್ಷ ರೂ. ಪರಿಹಾರ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.
ಕೇಂದ್ರದ ತಂಡ: ರಾಜ್ಯ ಸರ್ಕಾರದ ಮನವಿ ಮೇರೆಗೆ ಕೊಡಗು ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗಳ ಅಧ್ಯಯನಕ್ಕಾಗಿ 6 ಜನರ ಕೇಂದ್ರ ತಂಡ ಇಂದು ಆಗಮಿಸಲಿದೆ. ಇಂದು ಮತ್ತು ನಾಳೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಿದ್ದು, ಇದೇ 14 ರಂದು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ನೆರೆ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.

ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದ ಒಂದು ತಂಡ ಹಾಗೂ ಕೇಂದ್ರ ಹಣಕಾಸು ಇಲಾಖೆ ಉಪಕಾರ್ಯದರ್ಶಿ ಭಾತೇಂದ್ರಕುಮಾರ್ ನೇತೃತ್ವದ ಒಂದು ತಂಡ ಪ್ರತ್ಯೇಕವಾಗಿ ನೆರೆ ಪೀಡಿತ ಪ್ರದೇಶದಲ್ಲಿ ಅಧ್ಯಯನ ಮಾಡಲಿವೆ ಎಂದರು.  ಕೊಡಗು ಸೇರಿದಂತೆ ನೆರೆ ಪೀಡಿತ 7 ಜಿಲ್ಲೆಗಳಿಗೆ 200 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಿಂದ 100 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಉಂಟಾಗಿಲ್ಲ ಎಂದು ಹೇಳಿದರು.

Facebook Comments

Sri Raghav

Admin