ತನ್ನೊಂದಿಗಿದ್ದ ಮಹಿಳೆಯನ್ನು ಕೊಂದು ತಾನೂ ನೇಣಿಗೆ ಶರಣಾದ ಬಟ್ಟೆ ವ್ಯಾಪಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

murder-sucide-1

ಬೆಂಗಳೂರು, ಸೆ.11-ಬಟ್ಟೆ ವ್ಯಾಪಾರಿ ಹಾಗೂ ಟೈಲರ್, ತನ್ನ ಜೊತೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿವೇಕನಗರದ ವನ್ನಾರ್‍ಪೇಟೆಯ ಬಾಲಾಜಿ ಥಿಯೇಟರ್ ಮುಂಭಾಗದ ಜನಾರ್ದನ್ ಬಿಲ್ಡಿಂಗ್ ನಿವಾಸಿ ರವೀಂದ್ರನ್ (69) ಅವರು ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಉಮಾ (60) ಅವರನ್ನು ಕೊಲೆ ಮಾಡಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೇರಳ ಮೂಲದ ರವೀಂದ್ರನ್ ಅವರು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಮಿಲಿಟರಿ ಯೂನಿಫಾರಂ ಹೊಲಿಯುವ ಟೈಲರ್ ಕೆಲಸವನ್ನೂ ಮಾಡುತ್ತ್ತಿದ್ದರು. ಕೊಡಗು ಮೂಲದ ಉಮಾ ಅವರೊಂದಿಗೆ 1999ರಿಂದ ವನ್ನಾರ್‍ಪೇಟೆಯ ನಿವಾಸದಲ್ಲಿ ಸಹ ಜೀವನ ನಡೆಸುತ್ತಿದ್ದರು. ಕಳೆದ ಎರಡು ಮೂರು ದಿನಗಳಿಂದ ಇವರ ಮನೆಯ ಬಾಗಿಲು ತೆರೆದಿರಲಿಲ್ಲ. ಮಾತ್ರವಲ್ಲ ಮನೆಯಿಂದ ವಾಸನೆ ಬರುತ್ತಿತ್ತು. ಮನೆ ಮಾಲೀಕರು ಅನುಮಾನಗೊಂಡು ಈ ಬಗ್ಗೆ ರವೀಂದ್ರನ್ ಅವರ ಪುತ್ರ ದೊಮ್ಮಲೂರು ನಿವಾಸಿ ರಿತ್ವಿನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ಇಬ್ಬರೂ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ವಿವೇಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ರವೀಂದ್ರನ್ ಅವರಿಗೆ ದೊಮ್ಮಲೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆ ಇದೆ. ಈ ಮನೆಯ ವಿಷಯದಲ್ಲಿ ವಿವಾದವಿತ್ತು. ಇದರಿಂದ ಅವರು ಜಿಗುಪ್ಸೆಗೊಂಡಿದ್ದರು. ಇದೇ ಕಾರಣಕ್ಕೆ ಉಮಾ ಅವರನ್ನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉಮಾ ಅವರ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ರವೀಂದ್ರನ್ ಅವರು ಉಮಾ ಅವರನ್ನು ಯಾವ ರೀತಿ ಹತ್ಯೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೃತದೇಹಗಳು ಸಂಪೂರ್ಣ ಕೊಳೆತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಯಾವ ರೀತಿ ಕೊಲೆ ಮಾಡಲಾಗಿದೆ ಎಂಬುದು ತಿಳಿಯಲಿದೆ ಎಂದು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿರುವ ವಿವೇಕನಗರ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin