ಕೊನೆಗೂ ನಿಝಾಮ್ ಮ್ಯೂಸಿಯಂನ ಚಿನ್ನದ ಟಿಫಿನ್ ಬಾಕ್ಸ್ ರಾಬರಿ ಪ್ರಕರಣ ಬೇಧಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Robbery

ಹೈದರಾಬಾದ್, ಸೆ.11: ನಿಝಾಮ್ ಮ್ಯೂಸಿಯಂನಿಂದ ಕಳವಾಗಿದ್ದ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಚಾರಿತ್ರಿಕ ಮೌಲ್ಯದ ಚಿನ್ನಾಭರಣಗಳನ್ನು ಪತ್ತೆಹಚ್ಚಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. ಹಳೆ ಹೈದರಾಬಾದ್ ನಗರದಲ್ಲಿರುವ ಪುರಾನಿ ಹವೇಲಿಯಲ್ಲಿರುವ ಮ್ಯೂಸಿಯಂಗೆ ಸೆ.2ರ ರಾತ್ರಿ ನುಗ್ಗಿದ ಕಳ್ಳರು ಎರಡು ಕಿ.ಗ್ರಾಂ. ತೂಕದ ಚಿನ್ನದ ಟಿಫಿನ್ ಬಾಕ್ಸ್, ಕಪ್, ಸಾಸರ್, ವಜ್ರಖಚಿತ ಚಮಚ, ವಜ್ರಗಳು, ಮುತ್ತುಗಳನ್ನು ಕಳವು ಮಾಡಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿ ಬೆಲೆಬಾಳುವ ಐತಿಹಾಸಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಸೆಂಟ್ರಿಂಗ್ ಕಾರ್ಯ ನಿರ್ವಹಿಸುತ್ತಿದ್ದ 23 ವರ್ಷದ ಮುಹಮ್ಮದ್ ಘೌಸ್ ಪಾಷಾ ಅಲಿಯಾಸ್ ಖೂನಿ ಘೌಸ್ ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ 24 ವರ್ಶದ ಮುಹಮ್ಮದ್ ಮುಬೀನ್ ) ಎಂದು ಗುರುತಿಸಲಾಗಿದೆ.

ಬಾಲ್ಯಕಾಲದಿಂದಲೂ ಸ್ನೇಹಿತರಾಗಿರುವ ಇವರು ಕಳ್ಳತನ ಮಾಡುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ಘಟನೆ ನಡೆದ 45 ದಿನದ ಹಿಂದೆ ಮುಬೀನ್ ವೀಕ್ಷಕರ ಗುಂಪಿನಲ್ಲಿ ಸೇರಿಕೊಂಡು ಮ್ಯೂಸಿಯಂ ಪ್ರವೇಶಿಸಿ ಒಳಭಾಗದಲ್ಲಿರುವ ಭದ್ರತಾ ವ್ಯವಸ್ಥೆಯ ಲೋಪವನ್ನು ಗಮನಿಸಿದ್ದ. ಬಳಿಕ ತನ್ನ ಯೋಜನೆಯನ್ನು ಘೌಸ್‌ಗೆ ತಿಳಿಸಿದ್ದ. ಕಳವು ನಡೆದ ನಾಲ್ಕೈದು ದಿನದ ಹಿಂದೆ ಮ್ಯೂಸಿಯಂಗೆ ಹೋಗಿದ್ದ ಇವರು ಅಲ್ಲಿ ವೆಂಟಿಲೇಟರ್ ಇರುವ ಸ್ಥಳದಲ್ಲಿ ಗುರುತು ಹಾಕಿ ಬಂದಿದ್ದಾರೆ. ನಿರ್ಧರಿತ ದಿನದಂದು 10 ಮೀಟರ್ ಹಗ್ಗದ ನೆರವಿನಿಂದ ಮ್ಯೂಸಿಯಂನ ಪ್ರಥಮ ಮಹಡಿ ಏರಿದ ಕಳ್ಳರು ಅಲ್ಲಿದ್ದ ವೆಂಟಿಲೇಟರ್‌ನ ಕಬ್ಬಿಣದ ಗ್ರಿಲ್‌ಗಳನ್ನು ತುಂಡು ಮಾಡಿ ಒಳನುಗ್ಗಿದ್ದಾರೆ. ಮುಬೀನ್ ಹಗ್ಗ ಹಿಡಿದುಕೊಂಡಿದ್ದರೆ ಘೌಸ್ ಮ್ಯೂಸಿಯಂನ ಒಳನುಗ್ಗಿದ್ದಾನೆ. ವಾರ್ಡ್‌ರೋಬ್‌ನ ಬೀಗ ಮುರಿದು ಅಮೂಲ್ಯ ವಸ್ತುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತಮ್ಮ ಬಟ್ಟೆ ಬದಲಿಸಿಕೊಂಡು ಆ ಪರಿಸರದಲ್ಲಿ ಅಲೆದಾಡಿದ್ದಾರೆ. ನಂತರ ಹೆದ್ದಾರಿಯಾಗಿ ಝಹೀರಾಬಾದ್ ಕಡೆ ಸಾಗಿ ಬಳಿಕ ಅಡ್ಡ ರಸ್ತೆಯ ಮೂಲಕ ಹಿಂತಿರುಗಿದ್ದಾರೆ. ಕಳವು ನಡೆಸಿದವರು ನಗರವನ್ನು ಬಿಟ್ಟು ತೆರಳಿದ್ದಾರೆ ಎಂದು ಸಿಸಿಟಿವಿಯಲ್ಲಿ ತೋರಿಸಿಕೊಟ್ಟು ಪೊಲೀಸರ ಹಾದಿ ತಪ್ಪಿಸುವ ಉದ್ದೇಶ ಇವರದಾಗಿತ್ತು.

ನಂತರ ಕಳವು ಮಾಡಿದ ವಸ್ತುಗಳಲ್ಲಿ ಚಿನ್ನದ ಚಮಚವೊಂದನ್ನು ಸ್ಯಾಂಪಲ್ ಆಗಿ ತೋರಿಸಿ, ಕಳವು ಮಾಡಿರುವ ಚಿನ್ನದ ವಸ್ತುಗಳನ್ನು ವಿದೇಶದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮುಂಬೈಗೆ ವಾಪಾಸು ಬಂದಿದ್ದಾರೆ. ಆದರೆ ಸರಿಯಾದ ಡೀಲ್ ಕುದುರದ ಕಾರಣ, ಹೈದರಾಬಾದ್‌ಗೆ ಮರಳಿ ವ್ಯವಹಾರ ಕುದುರಿಸಲು ಸಮಯ ಕಾಯುತ್ತಿದ್ದರು. ಈ ಮಧ್ಯೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮುಬೀನ್ ಎಂಬಾತ ಕೆಲ ದಿನಗಳಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಮ್ಯೂಸಿಯಂನಲ್ಲಿರುವ ಪವಿತ್ರ ಗ್ರಂಥವನ್ನೂ ತಮ್ಮೊಂದಿಗೆ ಕೊಂಡೊಯ್ಯಲು ಇವರು ಬಯಸಿದ್ದರು. ಆದರೆ ಆ ವೇಳೆಗಾಗಲೇ ಸಮೀಪದ ಮಸೀದಿಯಿಂದ ಸಂಜೆಯ ಪ್ರಾರ್ಥನೆಯ ಕರೆ ಕೇಳಿಬಂದಾಗ ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು ಎನ್ನಲಾಗಿದೆ.

ಜಾಮರು ಬಳಸುತ್ತಿದ್ದ ಟಿಫನ್ ಬಾಕ್ಸ್, ಕಪ್, ಸಾಸರ್ , ಚಮಚಗಳು ಸೇರಿದಂತೆ ಆಳ್ವಿಕೆಯಲ್ಲಿ ರಾಜಮನೆತನದವರು ಬಳಸುತ್ತಿದ್ದ ವಸ್ತುಗಳನ್ನು ಕೂಡ ಈ ಮ್ಯೂಸಿಯಂನಲ್ಲಿ ಇಡಲಾಗಿತ್ತು. ಇವೇ ಅಲ್ಲದೆ ನಿಜಾಮರ ಮನೆತನದವರಾದ ಮೀರ್ ಒಸಮಾ ಅಲಿಖಾನ್ ಸೇರಿದಂತೆ ನಂತರದ 6ನೆ ರಾಜರ ಅಳ್ವಿಕೆಯಲ್ಲಿ ನೆರೆ ರಾಜ್ಯದ ರಾಜರು ನೀಡಿದ್ದ ಉಡುಗೊರೆಗಳು, 1930ರಲ್ಲಿ ಚಾಲ್ತಿಯಲ್ಲಿದ್ದ ರೋಲ್ಸ್ ರಾಯ್ ಕಾರುಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
2000ರಲ್ಲಿ ನಿಜಾಮದ ಕುಟುಂಬಸ್ಥರು ಈ ಮ್ಯೂಸಿಯಂ ಅನ್ನು ಸ್ಥಾಪನೆ ಮಾಡಿದ್ದು ಹೈದ್ರಾಬಾದ್‍ನಲ್ಲಿ ನಿಜಾಮ್ ಮ್ಯುಸಿಯಂ ಆಕರ್ಷಕ ಸ್ಥಳವಾಗಿ ಗುರುತಿಸಿಕೊಂಡಿದೆ. ಈ ಮ್ಯೂಸಿಯಂನಲ್ಲಿ 450 ಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನಿಟ್ಟಿದ್ದು ಇವುಗಳ ಮೌಲ್ಯ 250 ಕೋಟಿಯಿಂದ 500 ಕೋಟಿಯವರೆಗೂ ಬೆಲೆ ಬಾಳುತ್ತದೆ ಎಂದು ತಿಳಿದು ಬಂದಿದೆ.

ಟಿಫಿನ್ ಬಾಕ್ಸ್ ನಲ್ಲೇ ಕಳ್ಳನ ಊಟ :
ಕೋಟ್ಯಾಂತರ ಬೆಲೆ ಬಾಳುವ ಮೂರು ಡಬ್ಬಿ ಒಳಗೊಂಡ ಟಿಫಿನ್ ಬಾಕ್ಸ್ ಅನ್ನು ನಿಜಾಮರು ಬಳಸಿದ್ದರೋ ಇಲ್ಲವೋ ಆದರೆ ಈ ಇಬ್ಬರು ಕಳ್ಳರ ಪೈಕಿ ಒಬ್ಬ ದಿನವೂ ಅದರಲ್ಲೇ ಊಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin