36 ವರ್ಷಗಳ ರಾಜಕೀಯ ದ್ವೇಷ ಮರೆತು ಕೆಸಿಆರ್ ವಿರುದ್ಧ ಒಂದಾದ ಕಾಂಗ್ರೆಸ್-ಟಿಡಿಪಿ

ಈ ಸುದ್ದಿಯನ್ನು ಶೇರ್ ಮಾಡಿ

KCR-01

ಹೈದರಾಬಾದ್, ಸೆ.12 (ಪಿಟಿಐ)- ದಕ್ಷಿಣ ಭಾರತದಲ್ಲಿ ರಾಜಕೀಯ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಾರ್ಟಿ(ಟಿಡಿಪಿ) 36 ವರ್ಷಗಳ ದ್ವೇಷವನ್ನು ಬದಿಗಿಟ್ಟು ಒಗ್ಗೂಡಿರುವುದು ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ. ತೆಲಂಗಾಣದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಮತ್ತು ಟಿಡಿಪಿ ಮಹಾ ಮೈತ್ರಿಕೂಟಕ್ಕೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಸಹ ಸಾಥ್ ನೀಡಿದೆ.

ಹೈದರಾಬಾದ್‍ನಲ್ಲಿ ನಿನ್ನೆ ರಾತ್ರಿ ಜಂಟಿ ಸಭೆ ನಡೆಸುವ ಮೂಲಕ ತೆಲುಗು ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‍ಎಸ್) ಪಕ್ಷವನ್ನು ಎದುರಿಸಲು ಕಾಂಗ್ರೆಸ್, ಟಿಡಿಪಿ ಮತ್ತು ಸಿಪಿಐ ಮಹಾಮೈತ್ರಿ ಮಾಡಿಕೊಂಡಿವೆ.

ಈ ಸಂಬಂಧ ನಡೆದ ಜಂಟಿ ಸಭೆಯಲ್ಲಿ ಸಾಮಾನ್ಯ ಚುನಾವಣಾ ಪ್ರಣಾಳಿಕೆ ಸಿದ್ದಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಉತ್ತಮ್ ಕುಮಾರ್ ರೆಡ್ಡಿ, ತೆಲಂಗಾಣ ಟಿಡಿಪಿ ಅಧ್ಯಕ್ಷ ಎಲ್.ರಮಣ ಹಾಗು ಸಿಪಿಐ ರಾಜ್ಯ ಕಾರ್ಯದರ್ಶಿ ಚಡ ವೆಂಕಟ್ ರೆಡ್ಡಿ ಹಾಗೂ ಇತರ ಮುಖಂಡರು ಪಾಲ್ಗೊಂಡರು.

ಕೆಸಿಆರ್ ವಿರುದ್ಧ ಮಹಾಮೈತ್ರಿಗೆ ಮಹತ್ವದ ನಿರ್ಧಾರ ಕೈಗೊಂಡ ನಂತರ ನಡೆದ ಪ್ರಥಮ ಸಭೆ ಇದಾಗಿದೆ. ಟಿಡಿಪಿ ಕಾಂಗ್ರೆಸ್ ಜತೆ ಮೂರುವರೆ ದಶಕಗಳ ರಾಜಕೀಯ ಹಗೆತನ ಮರೆತು ಮೈತ್ರಿಗೆ ಕೈಜೋಡಿಸಿರುವುದು ಮಹತ್ವದ ವಿದ್ಯಮಾನವಾಗಿದೆ. ಸಭೆಯ ನಂತರ ಮಹಾ ಮೈತ್ರಿ ಬಗ್ಗೆ ಮಾಹಿತಿ ನೀಡಿದ ಟಿಪಿಸಿಸಿ ಅಧ್ಯಕ್ಷ ಉತ್ತಮ್ ಕುಮಾರ್, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಸರ್ವಾಧಿಕಾರಿ ಮತ್ತು ದುರಾಡಳಿತಕ್ಕೆ ಅಂತ್ಯ ಹಾಡಲು ಕಾಂಗ್ರೆಸ್-ಟಿಡಿಪಿ-ಸಿಪಿಐ ಒಗ್ಗೂಡಿವೆ. ನಾವು ಚುನಾವಣೆಗಾಗಿ ಸಾಮಾನ್ಯ ಪ್ರಣಾಳಿಕೆ ತಯಾರಿಸುತ್ತೇವೆ ಎಂದು ತಿಳಿಸಿದರು.  ವಿಧಾನಸಭೆ ಚುನಾವಣೆಗಳು ನಡೆಯುವ ತನಕ ತೆಲಂಗಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು.   ಇತರ ಸಮಾನ ಮನಸ್ಕ ಪ್ರತಿಪಕ್ಷಗಳನ್ನು ಒಗ್ಗೂಡಿಲು ಪ್ರಯತ್ನ ಮುಂದುವರಿದಿದೆ ಎಂದು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್.ಸಿ. ಖುಂಟಿಯಾ ಹೇಳಿದರು.

Facebook Comments

Sri Raghav

Admin