‘ಸಣ್ಣ ಪುಟ್ಟ ಅಸಮಾಧಾನಗಳಿರುವುದು ನಿಜ, ಆದರೆ ಸರ್ಕಾರ ಬೀಳಿಸುವ ಮಟ್ಟದ ಸಮಸ್ಯೆಗಳಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು , ಸೆ.12- ಪಕ್ಷದಲ್ಲಿ ಸಣ್ಣ ಪುಟ್ಟ ಅಸಮಾಧಾನಗಳಿರುವುದು ನಿಜ. ಆದರೆ ಅವು ಸರ್ಕಾರವನ್ನು ಬೀಳಿಸುವ ಮಟ್ಟದಲ್ಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸರ್ಕಾರ ಬೀಳುತ್ತದೆ ಎಂಬ ವದಂತಿಗಳನ್ನು ಹಬ್ಬಿಸುತ್ತಲೇ ಇದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯ ಯಡಿಯೂರಪ್ಪ ಹಾಗೂ ಸುತ್ತಮುತ್ತಲಿರುವವರು ಈ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿನ ಸಮಸ್ಯೆ ಬಗೆಹರಿದಿದೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವ ಸಚಿವರು ಇನ್ನೊಬ್ಬ ಸಚಿವರ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯಭಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಆಡಳಿತಾತ್ಮಕ ವಿಷಯಗಳು ಅವರು ಹೇಳಿದಂತೆ ನಡೆಯುತ್ತದೆ.  ಯಾವುದೇ ನಿರ್ಣಯ ಕೈಗೊಳ್ಳುವಾಗಲೂ ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯಗಳನ್ನು ಪಡೆದೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರು ತಮ್ಮ ಕ್ಷೇತ್ರದಲ್ಲಿ ಕೆಲಸಗಳಾಗಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿ ಎರಡು ಮೂರು ಬಾರಿ ಹೇಳಿಕೆ ನೀಡಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅಂತಹ ಯಾವುದಾರರು ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ. ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವುಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದರು.

ಇನ್ನು ಬೆಳಗಾವಿ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಜಾರಕಿಹೊಳಿ ಸಹೋದರರು ಜತೆಯಾಗಿಯೇ ಇದ್ದವರು. ಎಲ್ಲಾ ನಿರ್ಣಯಗಳನ್ನು ಒಟ್ಟಾಗಿಯೇ ತೆಗೆದುಕೊಂಡವರು. ಈಗ ಸಣ್ಣಪುಟ್ಟ ವ್ಯತ್ಯಾಸಗಳಾಗಿದ್ದರೂ ಅದೇನು ದೊಡ್ಡದಲ್ಲ. ಎಲ್ಲವೂ ಬಗೆಹರಿಯಲಿದೆ. ನಿನ್ನೆ ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ, ಬಿ.ಸಿ.ಪಾಟೀಲ್ ಸೇರಿದಂತೆ ಹಲವಾರು ಶಾಸಕರು ತಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಯಾರು ಕೂಡ ಕಾಂಗ್ರೆಸ್ ತೊರೆದು ಹೋಗುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿ ಐದು ವರ್ಷ ಆಡಳಿತ ನಡೆಸಲಿದೆ ಎಂದು ಹೇಳಿದರು.

Facebook Comments

Sri Raghav

Admin