ಸ್ವರ್ಣಗೌರಿ ವ್ರತದ ಮಹತ್ವ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

gouri-ganesha

ನಮ್ಮ ನಾಡಿನ ಹೆಣ್ಣು ಮಕ್ಕಳ ಅತೀ ಸಡಗರದ ಹಬ್ಬ, ಗೌರೀ ಹಬ್ಬ. ಹಾಗೆಯೇ ಎಲ್ಲ ಹುಡುಗರ ಸಂಭ್ರಮದ ಹಬ್ಬ ಗಣೇಶನ ಹಬ್ಬ. ಯಾವ ಹಬ್ಬಕ್ಕೂ ಇಲ್ಲದ ಒಂದು ವಿಶೇಷತೆ ಈ ಗೌರಿ-ಗಣೇಶ ಹಬ್ಬಗಳಿಗಿವೆ. ಆ ಜಗದಂಬಿಕೆಯಾದ, ಹರನ ನಲ್ಮೆಯ ಮಡದಿ ಪಾರ್ವತೀದೇವಿ ಸಡಗರದಿಂದ ತಾನಾಗಿಯೇ ನಮ್ಮ ಮನೆಗೆ ಬರುತ್ತಾಳೆ. ಪಾರ್ವತಿ ದೇವಿ ಈ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಈ ಶಂಕರನ ಪತ್ನಿಗೆ ಪೃಥಿವೀ ಎಂದೂ ಹೆಸರಿದೆ.  ಒಮ್ಮೆ ಕೈಲಾಸದಲ್ಲಿ ತನ್ನ ಪತಿಯೊಂದಿಗೆ ಕುಳಿತ ಪಾರ್ವತೀದೇವಿ ಪರಶಿವನನ್ನು ಪ್ರಾರ್ಥಿಸಿ, ತಾಯಿಯ ಮನೆಗೆ ಹೋಗಿ ಬರುತ್ತೇನೆ. ಅನುಜ್ಞೆ ಕೊಡು ಎಂದು ಕೇಳುತ್ತಾಳೆ. ಅದಕ್ಕೆ ಗೌರೀವಲ್ಲಭ, ನೀ ಹೋದರೆ ನನ್ನನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸುತ್ತಾನೆ.

ಜಗದ ರಕ್ಷಣೆ ಮಾಡುವ ನಿಮ್ಮನ್ನು ನಾನು ನೋಡಿಕೊಳ್ಳಬೇಕೆ, ಮೂರು ದಿನದ ಮಟ್ಟಿಗೆ ಕಳುಹಿಸಿಕೊಡಿ ಎಂದು ಪ್ರಾರ್ಥಿಸುತ್ತಾಳೆ. ಆಗ ಹೋಗಿ ಬಾ ಎಂದು ಹೇಳುವ ರುದ್ರದೇವರು, ತನ್ನ ಪ್ರೇಮದ ಮಡದಿಯ ಮೇಲಣ ಪ್ರೀತಿಯಿಂದಲೂ, ಅವಳಿಗೆ ತವರಿನ ಮೇಲೆ ಇರುವ ಅಭಿಮಾನವನ್ನು ತಿಳಿದಿದ್ದರಿಂದ ಮೂರು ದಿನ ಅಲ್ಲ, ಐದು ಅಥವಾ ಏಳು ದಿನಗಳಾದರೂ ಇದ್ದು ಬಾ. ನೀ ಹೊರಡು, ನಾನು ಗಣಪತಿಯ ಸಮೇತನಾಗಿ ಬಂದು ನಿನ್ನನ್ನು ಕರೆದೊಯ್ಯುತ್ತೇನೆ ಎಂದು ಹೇಳುತ್ತಾನೆ.  ಶಿವನಿಗೆ ಆ ರುದ್ರದೇವರಿಗೆ ತನ್ನ ನಲ್ಮೆಯ ಮಡದಿ ಪಾರ್ವತಿಯ ಮೇಲೆ ಅದೆಷ್ಟು ಪ್ರೀತಿಯೆಂದರೆ ಅವಳನ್ನು ಕರೆತರಲು ಮರುದಿನವೇ ಗಣಪತಿಯನ್ನು ಕಳುಹಿಸುತ್ತಾನೆ. ಹೀಗಾಗಿ ತೃತೀಯ ತಿಥಿಯಂದು ಗೌರೀ ಹಬ್ಬ, ಅದರ ಮಾರನೆ ದಿವಸ ಚತುರ್ಥಿಯಂದು ಗಣಪತಿ ಹಬ್ಬ ಆಚರಿಸಲಾಗುತ್ತದೆ. ತಾಯಿಯ ಮನೆಗೆ ಮಗಳು ಬಂದಂತೆ, ಸಮಗ್ರ ಜಗತ್ತಿನ ತಾಯಿಯಾದ ಗೌರೀದೇವಿ ನಮ್ಮ ಮನೆಗೆ ಮಗಳಾಗಿ ಬರುತ್ತಾಳೆ. ಹೀಗಾಗಿ, ಈ ಸ್ವರ್ಣಗೌರಿ ವ್ರತ, ವಿನಾಯಕ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಶುದ್ಧವಾದ ಕ್ರಮದಲ್ಲಿ ಆಚರಿಸಬೇಕು.

ಮದುವೆಯಾಗಿ ಹೋಗಿ ಗಂಡನ ಮನೆಯನ್ನು ಬೆಳಗುತ್ತಿರುವ ಮಗಳು ಬಂದಾಗ ಎಷ್ಟು ಸಡಗರ ಪಡುತ್ತೇವೆಯೋ ಅದರ ಸಾವಿರಪಟ್ಟು ಸಂತೋಷದಿಂದ ಗೌರಿಹಬ್ಬವನ್ನು ಆಚರಿಸಬೇಕು. ಕಾರಣ, ಜಗದಂಬೆಯೇ ಮಗಳಾಗಿ ಬರುತ್ತಿದ್ದಾಳೆ. ಪ್ರತೀ ಮಾಸದ ತೃತೀಯದಂದು ಗೌರಿಯ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ಸ್ವರ್ಣಗೌರೀ ವ್ರತದಲ್ಲಿ ಮಣ್ಣಿನ ಗೌರೀದೇವಿಯ ಪ್ರತಿಮೆ ಮಾಡಿಸಬೇಕು.  ನಮ್ಮ ದೇವರು, ದೇವತೆಯರು ಕರುಣಾಳುಗಳು. ಒಂದು ದಳ ತುಳಸಿಗೆ, ಒಂದು ಬಿಲ್ವಪತ್ರೆಗೆ, ಒಂದು ಹೂವಿಗೆ, ಒಂದು ಗರಿಕೆಗೆ, ಬಿಂದು ಗಂಗೋದಕಕ್ಕೆ ಒಲಿಯುವವರು. ಹೀಗಾಗಿ ಮಣ್ಣಿನಲ್ಲಿ ಪ್ರತಿಮೆ ಮಾಡಿಸಿ, ಪೂಜಿಸಿ ಶುದ್ಧವಾದ ನೀರಿನಲ್ಲಿ ವಿಸರ್ಜಿಸುವುದು ಶ್ರೇಷ್ಠ ಕ್ರಮ.

ಪಾರ್ವತಿದೇವಿ ಸಮಗ್ರ ಚರಾಚರ ವಸ್ತುಗಳ, ವಿಶೇಷವಾಗಿ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ಅವಳು ವ್ಯಾಪಿಸಿರುವ ಕಾರಣಕ್ಕೆ ಅವಳು ಪೃಥಿವೀ ಎಂದು ಕರೆಸಿಕೊಳ್ಳುತ್ತಾಳೆ ಎಂದು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ. ಆ ತಾಯಿ ಪಾರ್ವತಿ, ತನ್ನವರ ಮೇಲೆ ಅನುಗ್ರಹ ಮಾಡಲು ಕೈಲಾಸದಿಂದ ಕೆಳಗಿಳಿದು ಬರುತ್ತಾಳೆ. ಮಳೆಗಾಲದ ಈ ಸಮಯದಲ್ಲಿ ಮಳೆಯ ಮುಖಾಂತರ ಧರೆಗಿಳಿದು  ಮಣ್ಣಿನ ಕಣಕಣದಲ್ಲಿಯೂ ಅವಳು ವ್ಯಾಪಿಸಿರುತ್ತಾಳೆ. ಹೀಗಾಗಿ ಮಳೆ ಬಿದ್ದು ಮೆತ್ತಗಾದ ಕೆರೆಯ ಜೇಡಿಮಣ್ಣನ್ನು  ತಂದು ಕುಂಬಾರರು ಪ್ರತಿಮೆಗಳನ್ನು ಮಾಡುತ್ತಾರೆ. ಮಣ್ಣಿನ ವಿಗ್ರಹಗಳೇ ಅತ್ಯಂತ ಶ್ರೇಷ್ಠ. ಕೈಲಾಸದ ಪರ್ವತದಿಂದ ಮೇಘದ ರೂಪದಲ್ಲಿ ಹೊರಟ ಪಾರ್ವತಿ ದೇವಿ ಮಳೆಯಾಗಿ ಭೂಮಿ ಸೇರುತ್ತಾಳೆ. ಮಳೆಗಾಲದ ಈ ಮಣ್ಣಿನಲ್ಲಿ ಸ್ವಾಭಾವಿಕವಾಗಿ ಸುಗಂಧಮಯಳಾದ ಪಾರ್ವತಿದೇವಿಯ ಸನ್ನಿಧಾನವಿರುತ್ತದೆ. ಕುಂಬಾರರ ಮನೆಯಿಂದ ಆ ಪ್ರತಿಮೆಯನ್ನು ವಾದ್ಯಗಳ ಸಮೇತವಾಗಿ ತರುವಾಗ ಗಾಳಿಯಲ್ಲಿರುವ ಪಾರ್ವತೀದೇವಿ ಪ್ರತಿಮೆಯಲ್ಲಿ ಸೇರುತ್ತಾಳೆ. ನಾವು ಅದನ್ನು ಆರತಿ ಎತ್ತಿ ಮನೆಯೊಳಗೆ ತಂದಿಟ್ಟು ಪ್ರತಿಮೆಯ ಮುಂದೆ ದೀಪ ಹಚ್ಚಿದಾಗ ಅದರಲ್ಲಿನ ಜ್ಯೋತಿ ರೂಪದಿಂದ ತಾಯಿ ಪ್ರತಿಮೆಯನ್ನು ಸೇರುತ್ತಾಳೆ. ಮಾರನೆಯ ದಿವಸ ಪ್ರಾಣ ಪ್ರತಿಷ್ಠಾಪನೆಯ ಮಂತ್ರಗಳನ್ನು ಹೇಳಿದಾಗ ಅದರಲ್ಲಿ ಪಾರ್ವತಿ ದೇವಿ ಸನ್ನಿಹಿತಳಾಗುತ್ತಾಳೆ ಎಂಬ ನಂಬಿಕೆ ಇದೆ.

ದಾರಿಯಲ್ಲಿ ಹೋಗುವಾಗ ವಾಯುವಿನಲ್ಲಿ ಮತ್ತು ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರು ಭೂಮಿಯಲ್ಲಿ ಸೇರುತ್ತಾಳೆ. ಗಣಪತಿಯೂ ಸಹ ಇದೇ ರೀತಿಯಲ್ಲಿ ಪಂಚಭೂತಾತ್ಮಕನಾಗಿ ನಮ್ಮ ಮನೆ ಸೇರುತ್ತಾನೆ. ಮತ್ತೆ ನೀರಿನಲ್ಲಿ ವಿಸರ್ಜಿಸಿದಾಗ ಆ ಸಮಗ್ರ ದೈವೀಶಕ್ತಿ ಜಗತ್ತಿನಲ್ಲಿ ವ್ಯಾಪಿಸುತ್ತದೆ. ಅಂದರೆ, ಪಂಚಭೂತಗಳಲ್ಲಿನ ದೇವತಾಶಕ್ತಿಯನ್ನು ಒಂದೆಡೆ ಸೇರಿಸಿ, ಆ ಶಕ್ತಿಸ್ವರೂಪಿಣಿಯನ್ನು, ವಿಘ್ನನಿವಾರಕನನ್ನು ಭಕ್ತಿಯಿಂದ ಪೂಜಿಸಿ ಆ ನಂತರ ಆ ಶಕ್ತಿಯನ್ನು ಮತ್ತೆ ಪಂಚಭೂತಗಳಲ್ಲಿ ಸೇರಿಸುವುದು ಎಂಬರ್ಥವಿದೆ.  ವಿಶ್ವನಾಥನನ್ನು, ಗಣಪತಿಯನ್ನು ಅವರ ಅಂತರ್ಯಾಮಿಯಾದ ಲಕ್ಷ್ಮೀರಮಣ- ನಾರಾಯಣರನ್ನು ಆರಾಧಿಸುವ ದಿವ್ಯವಾದ ಹಬ್ಬ ಗೌರೀ-ಗಣೇಶ. ಇದು ಕೇವಲ ಗೌರಿ-ಗಣಪತಿ ಹಬ್ಬದ ವಿಶೇಷತೆಗಳು. ನಾವು ಅನಂತವ್ರತ, ವರಮಹಾಲಕ್ಷ್ಮೀ ವ್ರತ ಮುಂತಾದವನ್ನು ಕಳಶದೊಳಗೆ ದೇವರನ್ನು ಆವಾಹಿಸಿ ಪೂಜಿಸುತ್ತೇವೆ. ಆದರೆ, ಗೌರೀ-ಗಣಪತಿ ವ್ರತಗಳಲ್ಲಿ ಮಾತ್ರ ಮಣ್ಣಿನ ಪ್ರತಿಮೆಗಳಲ್ಲಿ ಪೂಜೆ. ಕಾರಣ, ಗೌರೀ-ಗಣೇಶರ ಸನ್ನಿಧಾನ ಈ ಸಂದರ್ಭದಲ್ಲಿ ಪಂಚಭೂತಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮಳೆಯ ನೀರಿನಿಂದ ತೋಯ್ದ ಮಣ್ಣಿನಲ್ಲಿ ವ್ಯಾಪಿಸಿರುತ್ತದೆ.

# ಮರದ ಬಾಗಿನ : 
ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳು ಮರದ ಬಾಗಿನ ಕೊಟ್ಟು ತೆಗೆದುಕೊಳ್ಳುವುದು ಸಂಪ್ರದಾಯ.

gouri-ganesh-1

# ಬಾಗಿನದಲ್ಲಿ ಇಡುವ ಪದಾರ್ಥಗಳು: ಅರಿಶಿನ, ಕುಂಕುಮ, ಸಿಂಧೂರ, ಕನ್ನಡಿ, ಬಾಚಣಿಗೆ, ಕಾಡಿಗೆ, ಅಕ್ಕಿ, ತೊಗರಿ ಬೇಳೆ, ಹೆಸರು ಬೇಳೆ, ತೆಂಗಿನ ಕಾಯಿ, ವೀಳ್ಯದ ಎಲೆ-ಅಡಿಕೆ, ಬೆಲ್ಲ, ವಸ್ತ್ರ.
# ಬಾಗಿನ ಕೊಡುವ ಬಗೆ: ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುವುದು ವಾಡಿಕೆ.
ಸ್ವರ್ಣಗೌರಿ ಪೂಜೆ ನಂತರ ಬಲಗೈಗೆ 16 ಗಂಟುಗಳನ್ನು ಹಾಕಿದ, ಹೂ ಕಟ್ಟಿದ ಅರಿಶಿನದ ದಾರವನ್ನು ಹಿರಿಯರು ಕೈನಿಂದ ಕಟ್ಟಿಸಿಕೊಂಡು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದೂ ಕೂಡ ಈ ಹಬ್ಬದ ಪ್ರಮುಖ ಘಟ್ಟ.

 

Facebook Comments

Sri Raghav

Admin