ಪೊಲೀಸ್ ಕಾನ್‍ಸ್ಟೆಬಲ್‍ಗಳಿಗೆ ಕಂದಾಯ ನಿರೀಕ್ಷಕರ ಸರಿಸಮಾನ ವೇತನ

ಈ ಸುದ್ದಿಯನ್ನು ಶೇರ್ ಮಾಡಿ

Polcie--012

ಬೆಂಗಳೂರು, ಸೆ.12-ಪೊಲೀಸ್ ಕಾನ್‍ಸ್ಟೆಬಲ್‍ಗಳ ವೇತನವನ್ನು ಕಂದಾಯ ಇಲಾಖೆಯ ನಿರೀಕ್ಷಕರ ಹುದ್ದೆಗೆ ಸರಿಸಮಾನವಾಗಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಆರನೇ ವೇತನ ಆಯೋಗ ಜಾರಿ ವೇಳೆ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.  ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ರಚಿಸಲಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಆಧರಿಸಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿದೆ. ಸಮಿತಿ ವರದಿಗೂ ಮುನ್ನವೇ ಪೊಲೀಸರಿಗೆ 2 ಸಾವಿರ ರೂ.ಗಳ ಭತ್ಯೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 1.06 ಲಕ್ಷ ಪೊಲೀಸ್ ಹುದ್ದೆಗಳಿಗೆ ಮಂಜೂರಾತಿ ನೀಡಿದ್ದು, 75 ಸಾವಿರ ಕಾನ್‍ಸ್ಟೆಬಲ್‍ಗಳು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರ ಆಯುಕ್ತಾಲಯಕ್ಕೆ 24,875 ಹುದ್ದೆಗಳು ಮಂಜೂರಾಗಿದ್ದು, 18,331 ಮಂದಿ ಕೆಲಸ ಮಾಡುತ್ತಿದ್ದಾರೆ. 6,500 ಹುದ್ದೆಗಳು ಕೆಲಸ ಖಾಲಿ ಇವೆ. ಅದರಲ್ಲಿ ಒಂದೂವರೆ ಸಾವಿರ ಕಾನ್‍ಸ್ಟೆಬಲ್‍ಗಳ ಹುದ್ದೆಗೆ ನೇಮಕಾತಿಯಾಗಿ ತರಬೇತಿಯಲ್ಲಿದ್ದು, ಇನ್ನೇನು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.  ಪೊಲೀಸ್ ವಸತಿ ಗೃಹಗಳಿಗೆ 2,872 ಕೋಟಿ ಖರ್ಚು ಮಾಡಿ, ಮೂರು ಹಂತಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಜೊತೆಗೆ ಬಿಡಿಎ ನಿರ್ಮಿಸಿರುವ 2 ಸಾವಿರ ಫ್ಲಾಟ್ ಖರೀದಿ ಮಾಡಿ ಪೊಲೀಸ್ ಸಿಬ್ಬಂದಿಗೆ ನೀಡಲಾಗುವುದು. ಕಾನೂನು ಸುವ್ಯವಸ್ಥೆ ರಕ್ಷಣೆಗೆ ಹೊಸ ಗಸ್ತು ವ್ಯವಸ್ಥೆ ರೂಪಿಸಲಾಗಿದೆ. ಅದರ ಪ್ರಕಾರ ಆಯಾ ಗಸ್ತಿನ ವ್ಯಾಪ್ತಿಯಲ್ಲಿ ವಾಸವಿರುವವರ ಸಂಪೂರ್ಣ ಮಾಹಿತಿಯನ್ನು ಕಾನ್‍ಸ್ಟೆಬಲ್‍ಗಳು ಇಟ್ಟುಕೊಳ್ಳಬೇಕು. ಈಗಾಗಲೇ ಬಲೇರಿಯಾ, ಇರಾನಿ ಗ್ಯಾಂಗ್‍ಗಳನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿರಿಸಿದ್ದಾರೆ. ಕಳ್ಳತನ ಪ್ರಕರಣ ನಿಯಂತ್ರಿಸಲಾಗಿದೆ. 107 ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ಬರುತ್ತಿದ್ದು, ಅವರನ್ನು ಗಡಿಪಾರು ಮಾಡಲು ಕೇಂದ್ರ ವಿದೇಶಾಂಗ ಸಚಿವಾಲಯದ ಅನುಮತಿ ಕೇಳಲಾಗಿದೆ. ವಿದೇಶಿ ಪ್ರಜೆಗಳ ಪೈಕಿ ಕೆಲವರು ಮಾದಕ ವಸ್ತುಗಳ ಸಾಗಾಣಿಕೆಯಲ್ಲೂ ಬಂಧಿತರಾಗಿದ್ದಾರೆ ಎಂದು ಹೇಳಿದರು.

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದೆ. 2006ರಲ್ಲಿ 23 ಲಕ್ಷ ವಾಹನಗಳು ನೋಂದಣಿಯಾಗಿದ್ದವು. 2018ರ ಜೂನ್ ವೇಳೆಗೆ 75,66,109 ನೋಂದಣಿಯಾಗಿವೆ. ಹೀಗಾಗಿ 10 ವರ್ಷದಲ್ಲಿ ವಾಹನಗಳ ನೋಂದಣಿ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. 37 ಕಡೆ ಹೈಡೆಫನೇಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ 300 ಕಡೆ ಈ ರೀತಿ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರಿ ಪೊಲೀಸರ ಜೊತೆ ಸಾರ್ವಜನಿಕರು ಅನಗತ್ಯವಾಗಿ ಜಗಳ ಮಾಡುವುದನ್ನು ಸಾಕ್ಷಿ ಸಮೇತ ಕೋರ್ಟ್‍ಗೆ ಹಾಜರು ಪಡಿಸಲು ಈಗಾಗಲೇ 50 ಮಂದಿ ಪೊಲೀಸರಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಎಲ್ಲಾ ಕಾನ್‍ಸ್ಟೆಬಲ್‍ಗಳಿಗೂ ಈ ಕ್ಯಾಮೆರಾಗಳನ್ನು ನೀಡಲಾಗುವುದು. ಮದ್ಯಪಾನಿಗಳ ತಪಾಸಣೆಗೆ 356 ಆಲ್ಕೋಹಾಲಿಕ್ ಮೀಟರ್‍ಗಳನ್ನು ನೀಡಿದ್ದೇವೆ. ದಂಡ ವಿಧಿಸಲು 625 ಎನ್‍ಫೋರ್ಸ್‍ಮೆಂಟ್ ಎಕ್ಯೂಪ್‍ಮೆಂಟ್‍ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಸಂಚಾರಿ ಪೊಲೀಸರು 2017ರಲ್ಲಿ 1,01,93,0000 ಪ್ರಕರಣಗಳನ್ನು ದಾಖಲಿಸಿ 112 ಕೋಟಿ ದಂಡ ವಸೂಲಿ ಮಾಡಿದ್ದಾರೆ. 2018ರಲ್ಲಿ ಈವರೆಗೆ 54.86 ಲಕ್ಷ ಪ್ರಕರಣಗಳನ್ನು ದಾಖಲಿಸಿ 55 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಹೇಳಿದರು. ಮಾದಕ ವಸ್ತುಗಳ ನಿಯಂತ್ರಣದಡಿ ಕಳೆದ ವರ್ಷ 354 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ವರ್ಷ 108 ಪ್ರಕರಣಗಳನ್ನು ದಾಖಲಿಸಿದ್ದೇವೆ. ಒಟ್ಟು 587 ಕೆಜಿ ಗಾಂಜಾ, 15 ಇತರೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 298 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಮಾದಕ ವಸ್ತು ಸಾಗಾಣಿಕೆದಾರರು, ಸರಗಳ್ಳರ ಮೇಲೂ ಗೂಂಡಾ ಕಾಯ್ದೆ ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ ಈವರೆಗೂ 14 ಮಂದಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಆಡಲಾಗಿದೆ. ಇನ್ನು ಮುಂದೆ ಯಾವುದೇ ಅಪರಾಧ ಪ್ರಕರಣಗಳು ನಡೆದರೂ ಆಯಾ ವಿಭಾಗದ ಎಸಿಪಿ, ಡಿಸಿಪಿಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು. ವಿಧಾನಸಭೇ ಚುನಾವಣೆ ಸಂದರ್ಭದಲ್ಲಿ 19 ಕೋಟಿ ಚಿನ್ನಾಭರಣಗಳು, ಇತರೆ ವಸ್ತುಗಳು, 12.29 ಕೋಟಿ ನಗದು ಸೇರಿ ಒಟ್ಟು 31 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣೆ ಸಂಬಂಧ ವಶಪಡಿಸಿಕೊಳ್ಳಲಾಗಿದೆ.

2017ರಲ್ಲಿ 483 ಪ್ರತಿಭಟನೆಗಳು ನಡೆದಿದ್ದು, ಎಲ್ಲವನ್ನೂ ಶಾಂತಿಯುತವಾಗಿ ನಿಭಾಯಿಸಲಾಗಿದೆ. ಒಂದು ಸಾವಿರಕ್ಕೂ ಮೇಲ್ಪಟ್ಟ ಜನರನ್ನು ಸೇರಿಸುವ ಗಣೇಶ ಪೆಂಡಾಲ್‍ಗಳಿಗೆ ಅಗ್ನಿಶಾಮಕ ದಳ ಸುರಕ್ಷತಾ ಪತ್ರ ಪಡೆಯಲು 5 ಸಾವಿರ ರೂ. ಠೇವಣಿ ಇಡಲು ಆದೇಶ ಜಾರಿಗೆ ಉಳಿದಂತೆ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದರು. ಸೈಬರ್ ಕ್ರೈಂಗಳನ್ನು ನಿಭಾಯಿಸುವ ವಿಷಯದಲ್ಲಿ ಕರ್ನಾಟಕ ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಮುಂದಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಜರ್ಮನಿಯ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.

Facebook Comments

Sri Raghav

Admin