ರಾಜ್ಯದಲ್ಲಿ ಜೋರಾಗಿದೆ ಉರುಳಿಸುವ – ಉಳಿಸುವ ರಾಜಕೀಯ ಆಟ..!

ಈ ಸುದ್ದಿಯನ್ನು ಶೇರ್ ಮಾಡಿ

BJP-JDS-CONGRESS

ಬೆಂಗಳೂರು, ಸೆ.12- ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪ್ರತಿಪಕ್ಷ ಬಿಜೆಪಿ ಸರ್ಕಾರ ಉರುಳಿಸುವ ಯತ್ನ ಮುಂದುವರಿಸಿದರೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿವೆ. ಒಟ್ಟಾರೆ ಗೌರಿ-ಗಣೇಶ ಹಬ್ಬದ ದಿನವಾದ ಇಂದು ಸಾರ್ವಜನಿಕರಿಗೆ ಹಬ್ಬದ ಸಡ ಗರವಾದರೆ, ರಾಜಕೀಯ ಪಕ್ಷ ಗಳು ಸರ್ಕಾರಕ್ಕಾಗಿ ಹೋರಾಟ ನಡೆಸುತ್ತಿವೆ. ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ಡೋಲಾಯಮಾನವಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಹೇಳುತ್ತ, ರಾಜಕೀಯ ದಾಳಗಳನ್ನು ಉರುಳಿಸಲಾರಂಭಿಸಿದೆ. ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಪ್ರತಿತಂತ್ರ ಹೆಣೆಯುವಲ್ಲಿ ನಿರತವಾಗಿವೆ.

ಬೆಳಗಾವಿಯ ಜಾರಕಿಹೊಳಿ ಸಹೋದರರ ಅಸಮಾಧಾನ, ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಉಂಟಾದ ಪಕ್ಷದಲ್ಲಿನ ಭಿನ್ನಮತ,
ಜಿದ್ದಾಜಿದ್ದಿ ಪರಿಸ್ಥಿತಿ, ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ಪ್ರಕರಣವನ್ನು ದಾಳವಾಗಿ ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಮಾಡುತ್ತಿರುವ ಪ್ರಯತ್ನ ಮುಂದುವರಿಸಿರುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಅನೇಕ ಮುಖಂಡರು ಗಂಭೀರ ಚರ್ಚೆ ನಡೆಸಿದರು.

ಅರವಿಂದ ಬೆಲ್ಲದ್, ಎಂ.ಪಿ.ರೇಣುಕಾಚಾರ್ಯ, ಗೋವಿಂದ ಕಾರಜೋಳ, ಸಿದ್ದು ಸವದಿ, ವೀರಣ್ಣ ಚರಂತಿಮಠ್, ಲಿಂಗಣ್ಣ, ಸುರೇಶ್ ಸೇರಿದಂತೆ ಆಪ್ತರು, ಮುಖಂಡರ ಜತೆ ಬಿ.ಎಸ್.ಯಡಿಯೂರಪ್ಪ ಸಮಾಲೋಚನೆ ನಡೆಸಿದರು.  ಇತ್ತ ಅತೃಪ್ತಗೊಂಡಿರುವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ನಿನ್ನೆ ತಡರಾತ್ರಿವರೆಗೆ ಚರ್ಚೆ ನಡೆಸಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳದಿರುವಂತೆ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಜಾರಕಿಹೊಳಿ ಸೋದರರ ಬಂಡಾಯಕ್ಕೆ ಬ್ರೇಕ್ ಹಾಕುವಂತೆ ಹೈಕಮಾಂಡ್‍ಅನ್ನು ಕೂಡ ಆಗ್ರಹಿಸಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಹೈಕಮಾಂಡ್‍ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಜಾರಕಿಹೊಳಿ ಸಹೋದರರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಶಾಸಕರ ಹಾಗೂ ಅತೃಪ್ತರ ಸಭೆ ಕರೆಯಿರಿ. ಸಭೆಯಲ್ಲಿ ಅಗತ್ಯಬಿದ್ದರೆ ನಾನೂ ಪಾಲ್ಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಕಾಂಗ್ರೆಸ್ ಮುಖಂಡರಾದ ಕೆ.ಸಿ.ಕೊಂಡಯ್ಯ, ಆರ್.ಬಿ.ತಿಮ್ಮಾಪುರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನವನ್ನು ಜಾರಕಿಹೊಳಿ ಸಹೋದರರ ಮೂಲಕ ಬಿಜೆಪಿ ನಡೆಸುತ್ತಿದೆ. ಸುಮಾರು 14ಕ್ಕೂ ಹೆಚ್ಚು ಶಾಸಕರು ಗೌರಿ ಹಬ್ಬದ ನಂತರ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವದಂತಿ ಹರಡುತ್ತಿದೆ.

ಮಾಧ್ಯಮಗಳಲ್ಲಿ ಈ ವಿಷಯ ವ್ಯಾಪಕವಾಗಿ ಬಿತ್ತರವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಯಡಿಯೂರಪ್ಪ ನಿವಾಸದಲ್ಲಿ ಹಾಗೂ ಜಾರಕಿಹೊಳಿ ಸಹೋದರರ ನಿವಾಸದಲ್ಲಿ ನಿರಂತರ ಸಭೆಗಳು ನಡೆಯುತ್ತಿವೆ. ಡಿ.ಕೆ.ಶಿವಕುಮಾರ್ ಅವರಿಗೆ ಬೆಳಗಾವಿ ರಾಜಕಾರಣಕ್ಕೆ ತಲೆ ಹಾಕದಿರುವಂತೆ ಜಾರಕಿಹೊಳಿ ಸಹೋದರರು ಬಹಿರಂಗವಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಇದೇ 15ರ ನಂತರ ಹಿಂದಿರುಗಲಿದ್ದು, ನಂತರ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅತೃಪ್ತ ಜಾರಕಿಹೊಳಿ ಬಣದ ಹಲವರು ತಿಳಿಸಿದ್ದಾರೆ.  ಸದ್ಯಕ್ಕೆ ಈ ವಿಷಯ ತಣ್ಣಗಾದಂತೆ ಕಂಡುಬಂದರೂ ಬೂದಿ ಮುಚ್ಚಿದ ಕೆಂಡದಂತಿದೆ. ಹೈಕಮಾಂಡ್ ನಾಯಕರು ಮಧ್ಯ ಪ್ರವೇಶಿಸಿ ಎಲ್ಲ ಶಾಸಕರನ್ನು ಕರೆಯಿಸಿ ಮಾತುಕತೆ ನಡೆಸಬೇಕು. ಈ ಪ್ರಯತ್ನ ಮಾಡಲು ವರಿಷ್ಠರು ಮುಂದಾಗಿದ್ದಾರೆ.

ಯಾವುದೇ ಕಾರಣಕ್ಕೂ ಯಾವುದೇ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂದು ಹೇಳುತ್ತಲೇ ಬಿಜೆಪಿ ಹಲವು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂಬ ಅಂಶ ಕಂಡುಬಂದಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್‍ನವರೂ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಸಚಿವರಾದ ಸಾ.ರಾ.ಮಹೇಶ್ ಅವರು, ನಮ್ಮ ಸಂಪರ್ಕದಲ್ಲೂ ಬಿಜೆಪಿಯ 10 ಶಾಸಕರಿದ್ದಾರೆ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ರಾಜ್ಯದ ಜನರ ಹಿತ ಕಾಯಬೇಕಾಗಿದ್ದ ರಾಜಕೀಯ ಪಕ್ಷಗಳು ಸರ್ಕಾರವನ್ನು ಉರುಳಿಸುವ, ಉಳಿಸಿಕೊಳ್ಳುವ ಆಟದಲ್ಲಿ ತೊಡಗಿರುವುದು ವಿಪರ್ಯಾಸವಾಗಿದೆ.

Facebook Comments

Sri Raghav

Admin