ದೀಪಾವಳಿಗೆ ಮಾರಲು ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟಗೊಂಡು ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

eeroad

ಈರೋಡ್(ತ.ನಾ.), ಸೆ.12 (ಪಿಟಿಐ)- ದೀಪಾವಳಿಗಾಗಿ ಮಾರಾಟ ಮಾಡಲು ಸಂಗ್ರಹಿಸಲಾಗಿದ್ದ ನಿಷೇಧಿತ ಪಟಾಕಿಗಳು ಸ್ಫೋಟಗೊಂಡು ಮೂವರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಈರೋಡ್‍ನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.  ಈ ದುರಂತದಲ್ಲಿ ಒಂದು ವ್ಯಾನ್ ಹಾಗೂ 10 ಮನೆಗಳಿಗೆ ಭಾರೀ ಹಾನಿಯಾಗಿದೆ. ಈರೋಡ್‍ನ ಶಾಸ್ತ್ರೀನಗರದಲ್ಲಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ. ನಿಷೇಧಿಸಲಾಗಿದ್ದ ಪಟಾಕಿಗಳನ್ನು ವ್ಯಾನೊಂದರಲ್ಲಿ ಕೊಂಡೊಯ್ದು ಸುಕುಮಾರ್ ಎಂಬುವರ ಮನೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪಟಾಕಿಗಳ ನಡುವೆ ತಿಕ್ಕಾಟ(ಫ್ರಿಕ್ಷನ್)ದಿಂದಾಗಿ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿತು.

ಈ ದುರ್ಘಟನೆಯಲ್ಲಿ ಮನೆಯ ಮಾಲೀಕನ ಮಗ ಸೇರಿದಂತೆ ಮೂವರು ತೀವ್ರ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ಧಾರೆ.
ದೀಪಾವಳಿಗಾಗಿ ಪಟಾಕಿಗಳು, ಬಾಣಬಿರುಸುಗಳು ಹಾಗೂ ಸಿಡಿಮದ್ದುಗಳನ್ನು ಈಗಿನಿಂದಲೇ ಸಂಗ್ರಹಿಸಲಾಗುತ್ತಿತ್ತು. ಇವುಗಳಲ್ಲಿ ಕೆಲವು ನಿಷೇಧಿತ ಮಾಲುಗಳಾಗಿದ್ದವು. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Facebook Comments