ಗಣಪನಿಗೆ ನೂರಾರು ಹೆಸರು, ನೂರಾರು ರೂಪ, ಯಾವ ಗಣೇಶನನ್ನು ಪೂಜಿಸಿದರೆ ಏನು ಫಲ ಸಿಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Ganesha--01

– ವಿಶ್ವಾಸ ಸೋಹೋನಿ

ಮಂಗಳಮೂರ್ತಿ ಗಣೇಶ ಮೂರ್ತಿಯನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿಸರ್ಜನೆ ಮಾಡುತ್ತಾರೆ. ಗಣಪತಿ ಎಂದರೆ, ಗಣಗಳ-ಸಮೂಹಗಳ ಅಧಿಪತಿ, ವಿಶ್ವದ ಎಲ್ಲ ಮಾನವ ಸಮಾಜಕ್ಕೆ ಒಡೆಯ. ಸರ್ವಗುಣಗಳ ಧಾರಿ, ಸರ್ವವಿದ್ಯೆಗಳಲ್ಲಿ ಪಾರಂಗತನು, ಅವನಿಗೆ ಏಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ಬೆನಕ, ಹೇರಂಭ, ದುಃಖಹರ್ತ, ಸುಖಕರ್ತ, ಲಂಬೋಧರ, ವಿನಾಯಕ, ಗಜಮುಖ, ಮೂಷಕವಾಹನ, ಮೋದಕಪ್ರಿಯ ಮುಂತಾದ ಅನೇಕ ಹೆಸರುಗಳಿವೆ.

ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ಮಂಗಳಮೂರ್ತಿ ಎಂದೂ, ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರನೆಂದು, ದುಃಖ ತೊಡೆದು ಸುಖ ಕೊಡುವುದರಿಂದ ದುಃಖಹರ್ತ-ಸುಖಕರ್ತ ನೆಂದು ಅವನ ಮಹಿಮೆ ಹೊಗಳಲಾಗುತ್ತದೆ. ಲಂಬೋಧರನೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ಅಪರಾಧಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮೆ ಮಾಡುವವನು ಎಂದು. ಹೀಗೆ ಅವನ ಅನೇಕ ನಾಮಗಳು ಗುಣಗಳ ವಾಚಕವಾಗಿವೆ. ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ. ಕಂಪ್ಯೂಟರ್‍ನಲ್ಲಿ ಹೇಗೆ ಮೌಸ್‍ನಿಂದ ಯಾವುದೇ ಕೆಲಸ ಮಾಡಬಹುದೋ ಹಾಗೆಯೇ ಇಲಿಯ ಮೇಲಿನ ಸವಾರಿಯು ಮನಸ್ಸು-ಬುದ್ಧಿಯ ಮೇಲೆ ನಿಯಂತ್ರಣ ಮಾಡುವ ಸಂಕೇತವಾಗಿದೆ. ಗಜಮುಖ ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಮೋದಕ ಪ್ರಿಯವೆಂದರೆ ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ.  ಗಣಪತಿಯ ಬಗೆಬಗೆಯ ಅವತಾರಗಳೂ ಇವೆ. ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.

ಬಾಲ ಗಣಪತಿ, ಹೆಸರೇ ಸೂಚಿಸುವಂತೆ ಗಣಪತಿಯ ಎಳೆಯ ಮಗುವಿನ ರೂಪ. ಇದು ಸ್ವಾಮಿಯ ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
ತರುಣ ಗಣಪತಿ, ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು ಎಂಟು ಕೈಗಳನ್ನು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಇರುತ್ತದೆ.
ವೀರ ಗಣಪತಿಯ ಅವತಾರದಲ್ಲಿ ಆಯುಧಗಳು 16 ಕೈಗಳಲ್ಲಿ ಇರುತ್ತವೆ. ಗಣಪತಿಯ ಈ ವೀರ ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
ಶಕ್ತಿ ಗಣಪತಿ ಅವತಾರದಲ್ಲಿ ಗಣಪತಿ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆ ಹಿಡಿದು ಕುಳಿತಿರುತ್ತಾಳೆ. ಈತನನ್ನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
ದ್ವಿಜ ಗಣಪತಿ ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯು ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನಂತರ ಕೊಲ್ಲಲ್ಪಟ್ಟು ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ ನಾಲ್ಕು ತಲೆಗಳಿವೆ.
ಸಿದ್ಧಿ ಗಣಪತಿಯನ್ನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
ಉಚ್ಚಿಷ್ಟ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು ಆರು ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
ವಿಘ್ನ ಗಣಪತಿಯನ್ನು ವಿಘ್ನೇ ಶ್ವರ, ವಿಘ್ನನಾಶಕ ಎಂದು ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿ ವಿಗ್ರಹವು ನಿಮಗೆ ಎದುರಾಗುವ ಎಲ್ಲ ಕಂಟಕಗಳನ್ನು ನಿವಾರಿಸುತ್ತಾನೆ.
ಕ್ಷಿಪ್ರ ಗಣಪತಿ, ಕೆಂಪು ವರ್ಣದ ಈ ಗಣಪತಿಯ ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ್ದಾನೆ. ಈತನಿಗೆ ಐದು ತಲೆಗಳಿದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನ ಏರಿರುವ ಅವತಾರವಾಗಿದೆ.
ಲಕ್ಷ್ಮೀ ಗಣಪತಿಯನ್ನು ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
ಮಹಾಗಣಪತಿ ಮಹಾ ಎಂಬ ಮಾತೇ ಶ್ರೇಷ್ಠ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು ಶಕ್ತಿಯ ಜತೆಯಲ್ಲಿ ಕುಳಿತಿರುತ್ತಾನೆ.
ವಿಜಯ ಗಣಪತಿ, ಹೆಸರೇ ಸೂಚಿಸುವಂತೆ ವಿಜಯದ ಸಂಕೇತ. ಈತನಿಗೆ ನಾಲ್ಕು ಕೈಗಳಿದ್ದು, ಮೂಷಕ ವಾಹನನಾಗಿ ಕಾಣಿಸುತ್ತಾನೆ.
ನೃತ್ಯ ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯ ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ.
ಊಧ್ರ್ವ ಗಣಪತಿ ಎಂದರೆ ಉದ್ದವಾಗಿ ಇರುವ ಗಣಪತಿ ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
ಏಕಾಕ್ಷರ ಗಣಪತಿ, ಹೆಸರೆ ಸೂಚಿಸುವಂತೆ ಒಂದೆ ಅಕ್ಷರದ ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
ವರದ ಗಣಪತಿ, ಯಾವುದಾದರೂ ಒಂದು ವರ ಬೇಕೆ? ಹಾಗಾದರೆ ವರದ ಗಣಪತಿಯನ್ನು ಪೂಜಿಸಿ. ಈತನಿಗೆ ಮೂರನೆ ಕಣ್ಣು ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
ತ್ರಯಾಕ್ಷರ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
ಕ್ಷಿಪ್ರ ಪ್ರಸಾದ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
ಹರಿದ್ರ ಗಣಪತಿ ಸುಂದರವಾದ ಚಿನ್ನದ ಬಣ್ಣ ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರ ಧರಿಸಿರುತ್ತಾನೆ.
ಏಕದಂತ ಗಣಪತಿ ಒಂದೆ ಒಂದು ದಂತವನ್ನು ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
ಸೃಷ್ಟಿ ಗಣಪತಿಯ ಈ ಸಣ್ಣರೂಪವು ಮೂಷಕ ವಾಹನವಾಗಿದ್ದು, ಒಳ್ಳೆಯ ಚಿತ್ತದಲ್ಲಿ ಕಾಣಿಸಿಕೊಳ್ಳುತ್ತಾನೆ.
ಉದ್ಧಂಡ ಗಣಪತಿ ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ. ಈ ಗಣಪತಿ 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
ಖುಣಮೋಚನ ಗಣಪತಿ ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
ದುಂಧಿ ಗಣಪತಿ ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷಿ ಮಾಲೆ ಹೊಂದಿರುತ್ತಾನೆ.
ದ್ವಿಮುಖ ಗಣಪತಿ, ಹೆಸರೇ ಸೂಚಿಸುವಂತೆ ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸಿನನಾಗಿರುತ್ತಾನೆ.
ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
ಯೋಗ ಗಣಪತಿ ಪದ್ಮಾಸನದಲ್ಲಿ ಕುಳಿತಿರು ತ್ತಾನೆ ಮತ್ತು ಧ್ಯಾನ, ಯೋಗ ನಿರತನಂತೆ ಕಾಣುತ್ತಾನೆ.
ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
ಸಂಕಷ್ಟಹರ ಗಣಪತಿಯ ಈ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತಾನೆ.

ಗಣೇಶನ ಅಷ್ಟ ವಿನಾಯಕ ಮಂದಿರಗಳು ಸುಪ್ರಸಿದ್ಧವಾಗಿವೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಷ್ಟವಿನಾಯಕ ದರ್ಶನ ಯಾತ್ರೆ ಮಾಡುತ್ತಾರೆ. ಮುಖ್ಯವಾಗಿ ಇದರಲ್ಲಿ ಅನೇಕ ಸ್ಥಳಗಳು ಸ್ವಯಂಭು ಮತ್ತು ಜಾಗೃತವಾಗಿವೆ.  ಮೋರೆಗಾಂನಲ್ಲಿ ಮೇರೆಶ್ವರ,  ಥೇಯುರದಲ್ಲಿ ಚಿಂತಾಮಣಿ, ಸಿದ್ಧಟೇಕದ ಸಿದ್ಧಿವಿನಾಯಕ, ರಾಂಜಣಗಾಂವದ ಮಹಾಗಣಪತಿ, ಓಝರನಲ್ಲಿ ವಿಘ್ನೇಶ್ವರ, ಲೆಣ್ಯಾದ್ರಿಯ ಗಿರಿಜಾತ್ಮಜ,  ಮಹಾಡದ ವರದ ವಿನಾಯಕ ಮತ್ತು ಪಾಲಿಯ ಬಲ್ಲಾಳೇಶ್ವರ. ಈ ರೀತಿ ಪುಣೆ ಜಿಲ್ಲೆಯಲ್ಲಿ  ಐದು, ರೈಗಡ್ ಜಿಲ್ಲೆಯಲ್ಲಿ ಎರಡು ಮತ್ತು ಅಹಮದ್‍ನಗರ ಜಿಲ್ಲೆಯಲ್ಲಿ ಒಂದು ತೀರ್ಥಸ್ಥಾನ ಇದೆ.  ವಾಸ್ತವವಾಗಿ ಗಣಪತಿ ಹಬ್ಬವು ಸುಖ-ಶಾಂತಿ-ಸಮೃದ್ಧಿ ತರುವ ಹಬ್ಬವಾಗಬೇಕು ಎಂಬುದು ಎಲ್ಲರ ಆಶಯವಾಗಿದೆ.

Facebook Comments

Sri Raghav

Admin