ಪಕ್ಷಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಇರುವಂತೆ ಬಿಎಸ್‍ವೈಗೆ ವರಿಷ್ಠರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು,ಸೆ.14- ರಾಜ್ಯ ಬಿಜೆಪಿ ಘಟಕದೊಳಗೆ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಬಿಜೆಪಿ ವರಿಷ್ಠರು ಪಕ್ಷಕ್ಕೆ ಹಾನಿಯಾಗದಂತೆ ಎಚ್ಚರವಹಿಸಬೇಕೆಂದು ಸೂಚಿಸಿದ್ದಾರೆ. ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನ ವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಅಮಿತ್ ಷಾ, ಮುಂಬರುವ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಪಕ್ಷದ ವರ್ಚಸ್ಸಿಗೆ ಹಾನಿಯಾಗಬಾರದೆಂಬ ಸಲಹೆ ನೀಡಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳು ನಮಗೆ ತೃಪ್ತಿಕರವಾಗಿಲ್ಲ. ಕೇವಲ ಒಂದು ರಾಜ್ಯಕ್ಕೋಸ್ಕರ ಇಡೀ ದೇಶವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಎಚ್ಚರಿಕೆಯಿಂದ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

ಅನ್ಯ ಪಕ್ಷಗಳಿಂದ ಶಾಸಕರು ಬಂದರೆ ವಿಳಂಬ ಮಾಡದೆ ಸರ್ಕಾರ ರಚನೆ ಮಾಡಬೇಕು. ಅದನ್ನು ಹೊರತುಪಡಿಸಿ ಹಾದಿಬೀದಿ ರಂಪ ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದರೆ ಇದು ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೂ ಧಕ್ಕೆಯಾಗುತ್ತದೆ.ಹಿಂದೆ ಒಂದು ಬಾರಿ ಕೈ ಸುಟ್ಟುಕೊಂಡಿದ್ದರಿಂದಲೇ ಪಕ್ಷಕ್ಕೆ ಹಾನಿಯಾಗಿತ್ತು. ಪುನಃ ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಬಿಎಸ್‍ವೈಗೆ ಅಮಿತ್ ಷಾ ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಹಿರಂಗ ಹೇಳಿಕೆ ಬೇಡ: ಇನ್ನು ಬಿಜೆಪಿಯ ಯಾವುದೇ ನಾಯಕರು ಈ ಬೆಳವಣಿಗೆಗಳ ಕುರಿತಂತೆ ಬಹಿರಂಗ ಹೇಳಿಕೆ ನೀಡುವ ಅಗತ್ಯವಿಲ್ಲ. ಮಾಧ್ಯಮಗಳ ಮುಂದೆ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರು ಮಾತ್ರ ಹೇಳಿಕೆ ನೀಡಬೇಕು. ಉಳಿದಂತೆ ಯಾವುದೇ ಪ್ರಮುಖರು ಅನಗತ್ಯವಾಗಿ ಹೇಳಿಕೆ ಕೊಡಬಾರದೆಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಹೇಳುವುದರಿಂದಲೇ ಗುಟ್ಟುಗಳೆಲ್ಲವೂ ರಟ್ಟಾಗುತ್ತವೆ. ಬಿಹಾರದಲ್ಲಿ ನಾವು ಜೆಡಿಯು ಜೊತೆ ಮೈತ್ರಿ ಮಾಡಿಕೊಳ್ಳುವಾಗ ಮಾಧ್ಯಮಗಳಿಗೆ ಯಾವುದೇ ಮಾಹಿತಿಯೇ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದ್ದೆವು. ಆದರೆ ಕರ್ನಾಟಕದಲ್ಲಿ ನಮ್ಮ ಪಕ್ಷದ ಸಣ್ಣಪುಟ್ಟ ವಿಷಯಗಳು ಕೂಡ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಗೌಪ್ಯತೆ ಕಾಪಾಡಿಕೊಳ್ಳದಿದ್ದರೆ ಇನ್ನು ಗುರಿ ಮುಟ್ಟಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

ಏನೇ ಮಾಡಿದರೂ ಪಕ್ಷದ ವರ್ಚಸ್ಸು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಾರದು. ನಾಳೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಟಕ್ಕಿಳಿಯಬಹುದು. ಮಹಾಘಟ್ ಬಂಧನ್ ಮೂಲಕ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ನಮ್ಮ ವಿರುದ್ಧ ಹೋರಾಟಕ್ಕೆ ಸಜ್ಜಾಗಬಹುದು. ಹಾಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂಬ ಆದೇಶ ಬಂದಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ ತೆಲಂಗಾಣ ಹಾಗೂ ಮಿಜಾರೋಂ ರಾಜ್ಯಗಳ ವಿಧಾನಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.  ಅಮಿತ್ ಷಾ ಅವರಿಂದ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಮ್ಮ ಬೆಂಬಲಿಗರು ಹಾಗೂ ಉಳಿದ ನಾಯಕರಿಗೆ ಮಾಧ್ಯಮಗಳ ಮುಂದೆ ಹೋಗದಂತೆ ಸೂಚಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin