ನಾಳೆ ಖುದ್ದಾಗಿ ಜಾರಕಿಹೊಳಿ ಸಹೋದರರ ಮನೆಗೆ ಹೋಗ್ತಿನಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumnar--01
ಬೆಂಗಳೂರು, ಸೆ.14- ಜಾರಕಿಹೊಳಿ ಸಹೋದರರು ನನಗೆ ಉತ್ತಮ ಸ್ನೇಹಿತರು. ಕಷ್ಟಕಾಲದಲ್ಲಿ ಅವರ ಜತೆ ಕಲ್ಲು ಬಂಡೆಯಂತೆ ನಿಂತಿದ್ದೇನೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾ ಯಗಳಿಲ್ಲ. ನಾಳೆ ಖುದ್ದಾಗಿ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ತಮ್ಮ ನಿವಾಸದಲ್ಲಿಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ಜತೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಾರಕಿಹೊಳಿ ಸಹೋದರರು ಮತ್ತು ನಾನು ಸುದೀರ್ಘ ಕಾಲದ ಸ್ನೇಹಿತರು. ಎಂಥೆಂತ ಸಮಯದಲ್ಲೂ ಅವರ ಜತೆ ಕಲ್ಲು ಬಂಡೆಯಂತೆ ನಿಂತಿದ್ದೇನೆ. ಅವರ ಜತೆ ಮಾತುಕತೆ ನಡೆಸುತ್ತೇನೆ. ಜಾರಕಿಹೊಳಿ ಸಹೋದರರು ಯಾವುದೋ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ನಾನು ರಾಷ್ಟ್ರಪತಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಹೋಗುತ್ತಿದ್ದೇನೆ. ಆಗ ಜಾರಕಿಹೊಳಿ ಸಹೋದರರ ಮನೆಗೆ ಭೇಟಿ ನೀಡುತ್ತೇನೆ ಎಂದರು.

ನನ್ನ ಹಾಗೂ ಜಾರಕಿಹೊಳಿ ಸಹೋದರರ ಸಂಬಂಧ ನಿಮಗೇನು ಗೊತ್ತು ? ಅದು ಭಗವಂತ ಮತ್ತು ಭಕ್ತರ ಸಂಬಂಧದಂತಿದೆ. ಎಲ್ಲವನ್ನೂ ಬಿಡಿಸಿ ಹೇಳಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು. ಬಿಜೆಪಿಯವರು ಕಾಂಗ್ರೆಸಿಗರನ್ನು ಸಂಪರ್ಕಿಸುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಅವರ ಬಳಿ ಮಾಹಿತಿ ಇದೆ. ಅದನ್ನು ಆಧರಿಸಿ ಅವರು ಆದಾಯ ತೆರಿಗೆ ಇಲಾಖೆ ಮತ್ತು ಎಸಿಬಿಗೆ ದೂರು ಕೊಡುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಎಲ್ಲವನ್ನೂ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಲವಾರು ಮಂತ್ರಿಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಶಾಸಕರಾದ ರಂಗನಾಥ್, ಮುನಿರತ್ನ ಅವರು ನಮ್ಮನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್‍ನ 78ಮಂದಿ ಶಾಸಕರು ಒಂದು ಕುಟುಂಬ ಇದ್ದಂತೆ ಎಲ್ಲರೂ ಒಟ್ಟಾಗಿದ್ದೇವೆ. ಕೆಲವರ ಮೇಲೆ ರಾಜಕೀಯ ಒತ್ತಡಗಳು ಬರುತ್ತಿವೆ ಎಂದು ಹೇಳಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಜತೆ ಸಂಪರ್ಕದಲ್ಲಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದರು.  ಇಂದಿನ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಹಾಗೂ ಇತ್ತೀಚೆಗೆ ನನ್ನ ಕುರಿತು ಕೇಳಿಬಂದ ಮಾತುಗಳ ಬಗ್ಗೆಯೂ ಚರ್ಚಿಸಲಾಯಿತು ಎಂದರು.

Facebook Comments

Sri Raghav

Admin