ಹೈಕಮಾಂಡ್ ರೆಡ್ ಸಿಗ್ನಲ್, ‘ಆಪರೇಷನ್ ಕಮಲ’ ಕೈಬಿಟ್ಟ ಬಿಜೆಪಿ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

BJP-Amit-shah-]

ಬೆಂಗಳೂರು, ಸೆ.14- ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಯಾವುದೇ ಪ್ರಯತ್ನ ಮಾಡಬಾರದು ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಪ್ರಯತ್ನವನ್ನು ರಾಜ್ಯ ಬಿಜೆಪಿ ನಾಯಕರು ಕೈಬಿಟ್ಟಿದ್ದಾರೆ.  ಸಮ್ಮಿಶ್ರ ಸರ್ಕಾರ ಸದ್ಯಕ್ಕೆ ಸೇಫ್ ಆಗಿದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳೆಲ್ಲ ತಣ್ಣಗಾದಂತಾಗಿವೆ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದ ಬಿಜೆಪಿ ನಾಯಕರಲ್ಲಿ ನಿರಾಸೆ ಮೂಡಿದೆ.  ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೇರಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಲವು ಸಮುದಾಯಗಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಇಂತಹ ಯಾವುದೇ ಪ್ರಯತ್ನ ಮಾಡಬಾರದು ಎಂದು ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆಯನ್ನು ಹೈಕಮಾಂಡ್ ವರಿಷ್ಠರು ರವಾನಿಸಿದ್ದಾರೆ ಎಂದು ತಿಳಿದುಬಂದಿದ್ದು, ರಾಜ್ಯ ನಾಯಕರು ಹಿಂದೆ ಸರಿದಿದ್ದಾರೆ. ಬೆಳಗಾವಿ ಕಾಂಗ್ರೆಸ್‍ನಲ್ಲಿ ಉಂಟಾದ ಭಿನ್ನಮತ, ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ಪ್ರಕರಣ ಇವುಗಳನ್ನು ದಾಳವಾಗಿ ಬಳಸಿಕೊಂಡು ಹಲವು ಕಾಂಗ್ರೆಸ್ ಅತೃಪ್ತ ಶಾಸಕರನ್ನು ತನ್ನತ್ತ ಸೆಳೆದು ಸರ್ಕಾರ ರಚನೆ ಮಾಡಲು ಮುಂದಾಗಿದ್ದ ಕ್ರಮಕ್ಕೆ ಆರ್‍ಎಸ್‍ಎಸ್ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.

ಯಾವುದೇ ಕಾರಣಕ್ಕೂ ಈ ಪ್ರಯತ್ನ ಮಾಡಬಾರದು ಎಂದು ಆರ್‍ಎಸ್‍ಎಸ್ ರಾಜ್ಯ ನಾಯಕರ ಕಿವಿ ಹಿಂಡಿತ್ತು. ಆದರೂ ಕೂಡ ಹಲವು ಪ್ರಯತ್ನಗಳು ಮುಂದುವರಿದಿದ್ದವು. ಕಾಂಗ್ರೆಸ್, ಜೆಡಿಎಸ್‍ನ ಕೆಲವು ಶಾಸಕರ ಮನವೊಲಿಸುವ ಪ್ರಯತ್ನ ನಡೆದಿದ್ದವು. ಬಳ್ಳಾರಿ, ಬೆಳಗಾಂ, ಬೆಂಗಳೂರಿನ ಹಲವು ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ಮುಂದುವರಿಸಿದ್ದರು.

ಈ ಎಲ್ಲ ಅಂಶಗಳು ಹೈಕಮಾಂಡ್‍ಗೆ ಗೊತ್ತಾದ ಹಿನ್ನೆಲೆಯಲ್ಲಿ ಯಾವುದೇ ಪ್ರಯತ್ನ ಮಾಡಬಾರದು. ಹಾಲಿ ಇರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಕೈ ಹಾಕಬಾರದು. ಸಮ್ಮಿಶ್ರ ಸರ್ಕಾರದಲ್ಲಿರುವ ಪಕ್ಷಗಳ ನಡುವೆ ವೈಮನಸ್ಸುಂಟಾಗಿ ಸರ್ಕಾರ ಪತನವಾದರೆ ಆಗಲಿ, ಅದಕ್ಕೆ ನಾವು ಕಾರಣವಾಗಬಾರದು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಾಡುತ್ತಿರುವ ಎಲ್ಲ ಪ್ರಯತ್ನಗಳನ್ನೂ ಕೈಬಿಟ್ಟಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ.

Facebook Comments

Sri Raghav

Admin