ಪತಿಯಿಂದ ಸರಗಳ್ಳತನ ಮಾಡಿಸುತ್ತಿದ್ದ ಪತ್ನಿಗಾಗಿ ಪೊಲೀಸರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Wife-Chain-snatcher
ಬೆಂಗಳೂರು,ಸೆ.14- ಕುಖ್ಯಾತ ಸರಗಳ್ಳ ಅಚ್ಯುತ್‍ಕುಮಾರ್ ಗಣಿ ಪತ್ನಿಗಾಗಿ ಪಶ್ಚಿಮ ವಿಭಾಗದ ಪೊಲೀಸರು ವ್ಯಾಪಕ ಶೋಧ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಈತನ ಪತ್ನಿ ತಲೆಮರೆಸಿಕೊಂಡು ಓಡಾಡುತ್ತಿದ್ದು, ಈಕೆಗಾಗಿ ಶೋಧ ಮುಂದುವರೆದಿದೆ. ನಗರ ಸೇರಿದಂತೆ ರಾಜ್ಯದ ಹಲವೆಡೆ ಅಚ್ಯುತ್‍ಕುಮಾರ್ ಸರಗಳ್ಳತನ ಮಾಡಿದ್ದನು. ಈತ ಜೂ.17ರಂದು ಕೆಂಗೇರಿ ಬಳಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಹಿಡಿಯಲು ಹೋದಾಗ ಕಾನ್‍ಸ್ಟೇಬಲ್‍ಗೆ ಇರಿದು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದನು.

ಈ ವೇಳೆ ಆತ್ಮ ರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಈತನಿಗೆ ತಗುಲಿ ಕುಸಿದು ಬಿದ್ದಾಗ ಪೊಲೀಸರು ಈತನನ್ನು ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಂಧನದ ನಂತರ ಬೆಂಗಳೂರು ಹೊರವಲಯದ ಕಣ್ಮಿಣಿಕೆಯಲ್ಲಿನ ಈತನ ಮನೆಯನ್ನು ಶೋಧಿಸಿದಾಗ ಪತ್ನಿ ಮಹಾದೇವಿ ಪರಾರಿಯಾಗಿದ್ದಳು.

ಸರಗಳ್ಳ ಅಚ್ಯುತ್ ಕುಮಾರ್‍ನಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಸರಗಳು ಹಾಗೂ ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಪಶ್ಚಿಮ ವಿಭಾಗದ ಸುಮಾರು 40 ಪ್ರಕರಣಗಳನ್ನು ಬಯಲಿಗೆಳೆದಿದ್ದರು.

ಆರೋಪಿ ಅಚ್ಯುತ್‍ಕುಮಾರ್ ಹೆಂಡತಿಯ ಮಾತಿನಂತೆ ಸರಗಳ್ಳತನ ನಡೆಸಿ ಐಷರಾಮಿ ಜೀವನ ನಡೆಸುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅಂದಿನಿಂದಲೂ ಈತನ ಪತ್ನಿ ತಲೆಮರೆಸಿಕೊಂಡಿದ್ದು, ಈಕೆಗಾಗಿ ಶೋಧ ಮುಂದುವರೆದಿದೆ.

Facebook Comments

Sri Raghav

Admin