ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

goonda

ಬೆಂಗಳೂರು, ಸೆ.14- ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಮಾರುತಿ ಅಲಿಯಾಸ್ ಮಂಜುನಾಥ ಅಲಿಯಾಸ್ ಮತ್ತಿ ಮಂಜ ಎಂಬಾತನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಚೋಳರ ಪಾಳ್ಯದ ನಿವಾಸಿಯಾದ ಆರೋಪಿ ಮಾರುತಿ ವಿರುದ್ಧ 22 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ವಿಜಯನಗರ 7, ಕೆಂಗೇರಿ 2, ರಾಜಾಜಿನಗರ 2, ಅನ್ನಪೂರ್ಣೇಶ್ವರಿ ನಗರ 1, ವಿಲ್ಸನ್ ಗಾರ್ಡನ್ 1 ಹಾಗೂ ಕೆ.ಪಿ.ಅಗ್ರಹಾರ ಠಾಣೆಯಲ್ಲಿ 2 ಪ್ರಕರಣ ಸೇರಿ ಒಟ್ಟು 22 ಪ್ರಕರಣಗಳು ದಾಖಲಾಗಿದ್ದು , ಈತ ಕೊಲೆ ಯತ್ನ , ದರೋಡೆ, ಸುಲಿಗೆ, ಹಲ್ಲೆ ಪ್ರಕರಣಗಳು ಮತ್ತು ಅಕ್ರಮ ಕೂಟ ಸೇರಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವನ್ನುಂಟು ಮಾಡುವಂತಹ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಈತ ಅಪರಾಧವೆಸಗುವ ಪ್ರವೃತ್ತಿ ಉಳ್ಳವನಾಗಿದ್ದು , ಸಮಾಜ ವಿದ್ರೋಹಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಿಂದ ತಡೆಗಟ್ಟಬೇಕಾದರೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಮಾರ್ಗದರ್ಶನದಲ್ಲಿ ವಿಜಯನಗರ ಉಪ ವಿಭಾಗದ ಎಸಿಪಿ ಪರಮೇಶ್ವರ ಹೆಗಡೆ , ಕೆ.ಪಿ.ಅಗ್ರಹಾರ ಠಾಣೆ ಇನ್ಸ್‍ಪೆಕ್ಟರ್ ಮಂಜುರವರು ಈತನ ವಿರುದ್ಧ ವರದಿ ತಯಾರಿಸಿ ಆಯುಕ್ತರಿಗೆ ಸಲ್ಲಿಸಿದ್ದರು. ಆಯುಕ್ತರು ವರದಿ ಆಧಾರದ ಮೇಲೆ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ಆದೇಶಿಸಿದ್ದರ ಮೇರೆಗೆ ಕೆಪಿ ಅಗ್ರಹಾರ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಪಶ್ಚಿಮ ವಿಭಾಗದಲ್ಲಿ ಕಳೆದ ಎರಡು ವಾರಗಳಲ್ಲಿ ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಅನ್ನು ಬಂಧಿಸಲಾದ ಮೂರನೆ ಪ್ರಕರಣ ಇದಾಗಿದೆ.  ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ರೌಡಿ ಶೀಟರ್‍ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಇನ್ನು ಮುಂದೆಯೂ ಸಹ ಇದೇ ರೀತಿ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿಯವರು ಸೂಚಿಸಿದ್ದಾರೆ.

Facebook Comments

Sri Raghav

Admin