ಬೈಕ್ ಕಳ್ಳನ ಬಂಧನ, 32 ಐಷಾರಾಮಿ ವಾಹನಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

Bikes-Robbers
ಬೆಂಗಳೂರು, ಸೆ.15- ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು, 20 ಲಕ್ಷ ರೂ.ಮೌಲ್ಯದ 32 ಐಷಾರಾಮಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೋರಮಂಗಲದ 8ನೆ ಬ್ಲಾಕ್‍ನ ರಾಜೇಂದ್ರನಗರದ ಶಿವ ಟಾಕೀಸ್ ಹತ್ತಿರ 2ನೆ ಕ್ರಾಸ್ ರೇಷನ್ ಡಿಪೊೀ ಎದುರುಗಡೆ ರಸ್ತೆ ನಿವಾಸಿ ಚಂದ್ರಕಾಂತ್ ಅಲಿಯಾಸ್ ಗುಂಡ (23) ಬಂಧಿತ ಆರೋಪಿ.

ಇತ್ತೀಚೆಗೆ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಹೆಚ್ಚಾಗಿ ನಡೆದ ಬಗ್ಗೆ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಂಗೇರಿ ಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ.ಎಸ್.ಪ್ರಕಾಶ್ ಅವರ ನೇತೃತ್ವದಲ್ಲಿ ಚಂದ್ರಾಲೇಔಟ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ವೀರೇಂದ್ರ ಪ್ರಸಾದ್ ಮತ್ತು ಪಿಎಸ್‍ಐ ಸಿ.ರವಿಕುಮಾರ್, ಜಿ.ಸಂತೋಷ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಈ ಹಿಂದೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರಿಂದ ಬಂಧಿತನಾಗಿ, ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಪುನಃ ದ್ವಿಚಕ್ರ ವಾಹನಗಳನ್ನು ಕಳವು ಮಾಡುವ ಪ್ರವೃತ್ತಿಯನ್ನು ಮುಂದುವರಿಸಿ, ನಗರದ ಚಂದ್ರಾಲೇಔಟ್, ಜ್ಞಾನಭಾರತಿ, ಅನ್ನಪೂರ್ಣೇಶ್ವರಿನಗರ, ಕೆಂಗೇರಿ, ಕಾಮಾಕ್ಷಿಪಾಳ್ಯ, ವಿಜಯನಗರ, ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮತ್ತು ಮಂಡ್ಯ ಜಿಲ್ಲೆಯ ವೆಸ್ಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಆರೋಪಿಯಿಂದ 20 ಲಕ್ಷ ರೂ. ಮೌಲ್ಯದ  32 ಐಷಾರಾಮಿ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin