ಸಿಎಂ ಕುಮಾರಸ್ವಾಮಿ ತಕ್ಷಣವೇ ಬಹಿರಂಗವಾಗಿ ಕ್ಷಮೆ ಕೇಳಬೇಕು

ಈ ಸುದ್ದಿಯನ್ನು ಶೇರ್ ಮಾಡಿ

Ayanuru-Manjunath--01

ಬೆಂಗಳೂರು, ಸೆ.15-ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕಿಂಗ್‍ಪಿನ್‍ಗಳನ್ನು ಬಳಸಿಕೊಂಡಿದ್ದರೆ ತಕ್ಷಣವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆ ಹೆಸರುಗಳನ್ನು ಬಹಿರಂಗಪಡಿಸಿ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಬಹಿರಂಗ ಕ್ಷಮೆ ಕೇಳಬೇಕೆಂದು ಬಿಜೆಪಿ ಆಗ್ರಹಿಸಿದೆ.

ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರವಿಕುಮಾರ್ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಕೆಲವರು, ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಕಿಂಗ್‍ಪಿನ್‍ಗಳ ಮೂಲಕ ನಾವು ದೋಸ್ತಿ ಸರ್ಕಾರವನ್ನು ದುರ್ಬಲಗೊಳಿಸಲು ಪ್ರಯತ್ನ ಮಾಡಿದ್ದರೆ ಕೂಡಲೇ ಹೆಸರುಗಳನ್ನು ಬಹಿರಂಗಪಡಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ವಿನಾಕಾರಣ ಹಿಟ್‍ಆ್ಯಂಡ್‍ರನ್ ಕೇಸ್ ಮಾಡಬಾರದು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ ಸರ್ಕಾರದ ಕಿಂಗ್‍ಪಿನ್‍ಗಳು. ನೀವು ಹಿಟ್‍ಆ್ಯಂಡ್‍ರನ್ ಮಾಡದೆ ಆ ಸಮಾಜಘಾತುಕ ಶಕ್ತಿಗಳ ಹೆಸರನ್ನು ಯಾವ ಕಾರಣಕ್ಕಾಗಿ ಬಹಿರಂಗ ಪಡಿಸಿಲ್ಲ. ಗೃಹ ಇಲಾಖೆ, ಗುಪ್ತಚರ ವಿಭಾಗ ನಿಮ್ಮ ಕೈಯಲ್ಲೇ ಇದೆ. ವಿಳಂಬವೇಕೆ ಎಂದು ಪ್ರಶ್ನಿಸಿದರು.

ನಿಮ್ಮ ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದು ಹೋದರೆ ಅದಕ್ಕೆ ಬಿಜೆಪಿ ಕಾರಣವಲ್ಲ. ಸರ್ಕಾರ ರಚನೆಯಾದ ದಿನದಿಂದಲೂ ನೀವು ಒಂದಿಲ್ಲೊಂದು ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದೀರಿ. ಸಚಿವ ಸಂಪುಟ ವಿಸ್ತರಣೆ, ಬಜೆಟ್ ಮಂಡನೆ, ಸಮನ್ವಯ ಸಮಿತಿ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹತ್ತು ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದೆ. ನಿಮ್ಮ ಒಳಜಗಳದಿಂದ ಸರ್ಕಾರ ಬಿದ್ದು ಹೋದರೆ 104 ಶಾಸಕರಿರುವ ನಾವು ಕಡ್ಲೆಕಾಯಿ ತಿನ್ನುತ್ತಿರುತ್ತೇವೆಯೇ ಎಂದು ಪ್ರಶ್ನಿಸಿದರು.

ಈ ಸರ್ಕಾರ ಬೇಕಾಗಿರುವುದು ಕೇವಲ ಮೂವರಿಗೆ ಮಾತ್ರ. ಎರಡು ಪಕ್ಷಗಳ ಅನೇಕ ಶಾಸಕರು ಅಸಮಾಧಾನಗೊಂಡು ಸರ್ಕಾರ ಬಿದ್ದು ಹೋದರೆ ಸಾಕು ಎಂಬಂತಾಗಿದ್ದಾರೆ. ನಿಮ್ಮ ಆಂತರಿಕ ಕಚ್ಚಾಟವನ್ನು ನಮ್ಮ ಪಕ್ಷದ ಮೇಲೆ ಹಾಕುವ ವಿಫಲ ಪ್ರಯತ್ನ ಮಾಡಬೇಡಿ. ಒಂದು ವೇಳೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡಿದ್ದರೆ ತನಿಖೆ ಮಾಡಿ ಹೆಸರುಗಳನ್ನು ಬಹಿರಂಗಪಡಿಸಲು ಮೀನಾಮೇಷ ಏಕೆ ಎಂದು ಮರು ಪ್ರಶ್ನಿಸಿದರು.

ಸಚಿವ ಎಚ್.ಡಿ.ರೇವಣ್ಣನವರ ಪುತ್ರ ಪಜ್ವಲ್‍ರೇವಣ್ಣ ಅವರೇ ಜೆಡಿಎಸ್ ಎಂದರೆ ಸೂಟ್‍ಕೇಸ್ ಪಕ್ಷ ಎಂದು ಹೇಳಿದ್ದಾರೆ. ನಾವು ಶಾಸಕರನ್ನು ಹಣದ ಮೂಲಕ ಖರೀದಿ ಮಾಡಲು ಪ್ರಯತ್ನಿಸಿದ್ದರೆ ಎಸಿಬಿ, ಲೋಕಾಯುಕ್ತಕ್ಕೆ ದೂರು ನೀಡಬಹುದು. ಐಟಿಯನ್ನು ಈವರೆಗೂ ಅನುಮಾನಿಸುತ್ತಿದ್ದ ನಿಮಗೆ ಈಗ ಇದ್ದಕ್ಕಿದ್ದಂತೆ ಏಕೆ ನೆನಪಾಯಿತು ? ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ರವಿಕುಮಾರ್ ವಾಗ್ದಾಳಿ ಮಾಡಿದರು.

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಗಾಂಧಿನಗರದಲ್ಲಿ ನಡೆಯುತ್ತಿರುವ ಜೂಜು ಅಡ್ಡೆಗೆ ರಕ್ಷಕರ್ಯಾರು ? ಅದನ್ನು ನಡೆಸುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಮಾಫಿಯಾದ ಬಗ್ಗೆ ಮಾತನಾಡುವ ದಿನೇಶ್‍ಗುಂಡೂರಾವ್‍ಗೆ ಇದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.

ಜೂಜುಕೋರರು, ರಿಯಲ್‍ಎಸ್ಟೇಟ್ ಮಾಫಿಯಾಗಳು, ಸಮಾಜಘಾತುಕ ಶಕ್ತಿಗಳು ಜೆಡಿಎಸ್‍ನಲ್ಲಿವೆ. ಇಂತಹವರು ಬಿಜೆಪಿ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ಮಾಫಿಯಾದ ಹೆಸರುಗಳನ್ನು ಬಹಿರಂಗಪಡಿಸಬೇಕು. ವಿನಾಕಾರಣ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

Facebook Comments

Sri Raghav

Admin