ಕಾರು-ಕ್ಯಾಂಟರ್ ಅಪಘಾತ ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Car-Canter-Accident

ಕುಣಿಗಲ್, ಸೆ.15- ಕಾರಿನ ಚಕ್ರ ಸ್ಫೋಟಗೊಂಡಿದ್ದರಿಂದ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ತಮಿಳುನಾಡಿನ ಕೊಯಂಮತ್ತೂರು ಮೂಲದ ಮನೋಜ್ (30), ಚಿನ್ನರಾಜು (55) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಸ್ಟೀಫನ್, ಲೂಥರ್‍ಸಿಂಗ್, ಜಯಪ್ರಕಾಶ್, ಸುಗುಣ ಎಂಬುವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರಿನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಯಂಮತ್ತೂರಿನಿಂದ ತವೇರಾ ಕಾರಿನಲ್ಲಿ ಎಂಟು ಮಂದಿ ತೆರಳುತ್ತಿದ್ದರು.
ಈ ಕಾರು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹಣಿಮಾವತ್ತೂರು ಬಳಿ ಬರುತ್ತಿದ್ದಂತೆ ಕಾರಿನ ಒಂದು ಚಕ್ರ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಕುಣಿಗಲ್ ಕಡೆಯಿಂದ ಎದುರಿಗೆ ಬರುತ್ತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಚಾಲಕ ಮನೋಜ್ ಹಾಗೂ ಚಿನ್ನರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದವರೆಲ್ಲ ಹೊರಗೆ ಒಂದೊಂದು ಕಡೆ ಬಿದ್ದಿದ್ದಾರೆ. ಸುದ್ದಿ ತಿಳಿದ ಹುಲಿಯೂರು ದುರ್ಗ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್, ವೃತ್ತ ನಿರೀಕ್ಷಕ ಅಶೋಕ್‍ಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಗಂಭೀರ ಗಾಯಗೊಂಡಿದ್ದ ನಾಲ್ವರನ್ನು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಸಣ್ಣಪುಟ್ಟ ಗಾಯಗೊಂಡ ಜೂಲಿ, ಆಲ್ವೀನ್ ಎಂಬುವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಪಘಾತ ನಡೆದ ರಾಜ್ಯ ಹೆದ್ದಾರಿ 33ರಲ್ಲಿ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.  ವೃತ್ತ ನಿರೀಕ್ಷಕರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.  ಹುಲಿಯೂರು ದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin