ಜನತಾದರ್ಶನದಲ್ಲಿ ಗಂಟೆಗಟ್ಟಲೇ ಕಾಯ್ದು ಕುಳಿತ ವಿಕಲಚೇತನರ ಮುಖದಲ್ಲಿ ಕೊನೆಗೂ ಮೂಡಿತು ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

Cm-Janatadarshana

ಬೆಳಗಾವಿ, ಸೆಪ್ಟೆಂಬರ್ 15 : ಸಾಲಾಗಿ ಕುಳಿತಿರುವ ವಿಕಲಚೇತನರು. ಎಲ್ಲರ ಮೊಗದಲಿ ನಿರೀಕ್ಷೆ ಒಂದೆಡೆಯಾದರೆ ನಾಡಿನ ಸಿಎಂ ಸ್ವತಃ ತಮ್ಮ ಬಳಿ ಬಂದು ಅಹವಾಲು ಆಲಿಸಿಯಾರೇ ಎಂಬ ಪ್ರಶ್ನಾರ್ಥಕ ಭಾವ ಇನ್ನೊಂದೆಡೆ; ಆದರೆ ಯಾರ ನಿರೀಕ್ಷೆಯೂ ಹುಸಿಯಾಗಲಿಲ್ಲ! ಸುವರ್ಣ ವಿಧಾನಸೌಧದ ದಕ್ಷಿಣ ದ್ವಾರದ ಬಳಿಯ ನೆಲಮಹಡಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದ ವಿಕಲಚೇತನರ ಬಳಿ ತೆರಳಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅತ್ಯಂತ ತಾಳ್ಮೆಯಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಮನೆಯ ಯಜಮಾನನಂತೆ ಸಮಾಧಾನದಿಂದಲೇ ಪ್ರತಿಯೊಬ್ಬರ ಬಳಿ ತೆರಳಿ ಅಹವಾಲು ಕೇಳಿದರು. ಹಿರಿಯರು-ಕಿರಿಯರು ಎಂಬ ಭೇದವೆಣಿಸದೇ ಎಲ್ಲರೊಂದಿಗೆ ಶಾಂತಚಿತ್ತರಾಗಿಯೇ ಮಾತನಾಡಿದ ಮುಖ್ಯಮಂತ್ರಿಗಳು, ಜನತಾದರ್ಶನದ ಮೊದಲ ಹಂತದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಅಹವಾಲು ಆಲಿಸಿದರು. ದುಃಖ ತಡೆಯದೇ ಕಣ್ಣೀರು ಹಾಕಿದ ಮಹಿಳೆಯರು, ಅನೇಕ ವರ್ಷಗಳಿಂದ ನ್ಯಾಯ ಸಿಗದೇ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನರಿಗೆ ಸ್ವತಃ ಮುಖ್ಯಮಂತ್ರಿಗಳೇ ಎದುರು ನಿಂತು‌ ಸಮಸ್ಯೆ ಕೇಳಿದಾಗ ಒಂದು ಕ್ಷಣ ದಿಗ್ಞೂಢರಾದರು.

ಕೆಲವರು ಕೈಮುಗಿದು ನನಗೆ ಸಹಾಯ ಮಾಡಿ ನಿಮಗೆ ಉಪಕಾರವಾಗುತ್ತೆ ಎಂದರೆ‌ ಇನ್ನೂ ಕೆಲವರು ಮಾತಿನ ಮೂಲಕ‌ ಹೇಳಲಾಗದೇ ಕಾಲು ಮುಗಿಯಲು ಮುಂದಾದರು. ಅದಕ್ಕೆ ಆಸ್ಪದ ನೀಡದ ಮುಖ್ಯಮಂತ್ರಿಗಳು, ನಿಮ್ಮ ಅಹವಾಲು ಕೇಳಲೆಂದೇ ಬಂದಿರುವೆ ಎಂದಾಗ ಹಿರಿಯಣ್ಣನ ಮುಂದೆ ಸಮಸ್ಯೆ ತೋಡಿಕೊಳ್ಳುವ ರೀತಿಯಲ್ಲಿ ತುಸು ಮುಜುಗರದಿಂದಲೇ ಅಹವಾಲು ಬಿಚ್ಚಿಟ್ಟರು. ಅಹವಾಲು ಆಲಿಸುತ್ತಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬೆಳಿಗ್ಗೆ 11 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು, ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಕರ್ನಾಟಕ ಲಾ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಿದರು.  ಅದಾದ ಬಳಿಕ ಕನ್ನಡ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಲಿಂದ ಕುಮಾರಸ್ವಾಮಿ ಬಡಾವಣೆಗೆ ತೆರಳಿ ಅಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿದರು. ಅಲ್ಲಿಂದ ನೇರವಾಗಿ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.

ಜನತಾದರ್ಶನದ ಮೊದಲ ಹಂತದಲ್ಲಿ ವಿಕಲಚೇತನರ ಅಹವಾಲುಗಳನ್ನು ಆಲಿಸಿದರು.  ಇದಾದ ನಂತರ ಸಂಜೆ 7 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಜನತಾದರ್ಶನ ಮುಂದುವರಿಸಿದರು.  ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು 1271ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು.  ಇಷ್ಟು‌ ಜನರನ್ನು ನೇರವಾಗಿ ಮಾತನಾಡಿಸಿ ಅಹವಾಲು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ತಾಳ್ಮೆಯು ಉತ್ತರವಾಗಿತ್ತು.

ಒಂದಿನಿತು ಬೇಸರ ಮಾಡಿಕೊಳ್ಳದೇ ಜನತಾ ದರ್ಶನ ಮುಂದುವರಿಸಿದರು. ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ ಮುಖ್ಯಮಂತ್ರಿಗಳು ಕೆಲವೊಂದು ಸಮಸ್ಯೆಗಳನ್ನು ಸ್ಥಳ ದಲ್ಲೇ ಬಗೆಹರಿಸಿದರು. ಕೆಲವು ಮನವಿಪತ್ರಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ವಹಿಸುವಂತೆ ಷರಾ ಬರೆದರು.
ಮುಖ್ಯಮಂತ್ರಿಯೇ ಸ್ವತಃ ಐದಾರು ಗಂಟೆಗಳ ಕಾಲ‌ನಿರಂತರವಾಗಿ ಅಹವಾಲು ಆಲಿಸುವುದನ್ನು ಕಂಡ ಜನರು ತಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ, ಮನವಿಪತ್ರ ಅವರ ಕೈಗಿಟ್ಟು ಇಂದಲ್ಲ ನಾಳೆಯಾದರೂ ತಮ್ಮ ಸಮಸ್ಯೆ ಇತ್ಯರ್ಥವಾಗಲಿದೆ ಎಂಬ ನೆಮ್ಮದಿಯ ನಿಟ್ಟುಸಿರಿನಿಂದ ಮನೆ ಕಡೆ ಹೆಜ್ಜೆ ಹಾಕಿದರು.

Facebook Comments

Sri Raghav

Admin