ತಾಳ್ಮೆ ಕಳೆದುಕೊಳ್ಳದೆ ಸಾವಿರಾರು ಮಂದಿಯ ಸಮಸ್ಯೆ ಆಲಿಸಿದ ಸಿಎಂ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--CM

ಬೆಳಗಾವಿ, ಸೆಪ್ಟೆಂಬರ್ 15- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಏರ್ಪಡಿಸಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುಮಾರು 3000 ಜನ ಆಗಮಿಸಿ ತಮ್ಮ ಕುಂದುಕೊರತೆಗಳ ಅಹವಾಲು ಸಲ್ಲಿಸಿದರು. ಇಂದು ಬೆಳಿಗ್ಗೆ ಕೆಎಲ್‍ಎಸ್ ಸಂಸ್ಥೆ ಹಾಗೂ ರಾಜಾ ಲಖಮಗೌಡ ಕಾನೂನು ಕಾಲೇಜು ಅಮೃತ ಮಹೋತ್ಸವ ಸಮಾರಂಭ, ಕನ್ನಡ ಭವನ ಉದ್ಘಾಟನೆ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಬಡಾವಣೆಯ ಜನರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಮಧ್ಯಾಹ್ನ 3 ಗಂಟೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದಾಗ ವಿಕಲಚೇತನರೂ ಸೇರಿದಂತೆ ಸಾವಿರಾರು ಜನ ತಮ್ಮ ಸಮಸ್ಯೆಗೆ ಪರಿಹಾರ ಕಾಣುವ ನಿರೀಕ್ಷೆಯಲ್ಲಿದ್ದರು.

ಮೊದಲಿಗೆ ವಿಕಲಚೇತನರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿದ್ದ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಖುದ್ದು ಪ್ರತಿಯೊಬ್ಬರ ಬಳಿಗೆ ತೆರಳಿ ಅವರ ಅಹವಾಲು ಸ್ವೀಕರಿಸಿ, ಅಧಿಕಾರಿಗಳಿಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಸೂಚಿಸಿದರು. ವೈದ್ಯಕೀಯ ಸಮಸ್ಯೆ ಹೊತ್ತು ಬಂದವರಿಗೆ ಪರಿಹಾರ ನಿಧಿಯಿಂದ ನೆರವು ಕಲ್ಪಿಸುವುದರ ಜೊತೆಗೆ ವಿವಿಧ ಆಸ್ಪತ್ರೆಗಳ ವೈದ್ಯರೊಂದಿಗೆ ಖುದ್ದು ಮಾತನಾಡಿ, ಚಿಕಿತ್ಸೆ ನೀಡಲು ಸೂಚಿಸಿದರು.

ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್, ಜಿಲ್ಲಾಧಿಕಾರಿ ಜಿಯಾವುಲ್ಲಾ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಚಿವಾಲಯದಲ್ಲಿ ಜನತಾದರ್ಶನ ನಿರ್ವಹಿಸುವ 16 ಮಂದಿ ಅಧಿಕಾರಿ/ ಸಿಬ್ಬಂದಿಯ ತಂಡ ಜೊತೆಗಿದ್ದರು. ಅರ್ಜಿದಾರರಿಗೆ ಕೂಡಲೇ ನೆರವು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು, ಅಲ್ಲದೆ ನೆರವು ನೀಡಲು ಕಾನೂನಿನ ತೊಡಕೇನಾದರೂ ಇದ್ದಲ್ಲಿ ತಮ್ಮ ಅನುಮತಿ ಪಡೆದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದರು.

ಬೆಳಗಾವಿ ಬಸ್ ನಿಲ್ದಾಣದಿಂದ ಸುವರ್ಣ ಸೌಧಕ್ಕೆ 5 ಉಚಿತ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದ ಸಾರ್ವಜನಿಕರಿಗೆ ಮಜ್ಜಿಗೆ, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಅಹವಾಲು ಸಲ್ಲಿಸಿದ ಜನರು ತಮ್ಮ ಕಷ್ಟ ಬಗೆಹರಿಯುವ ಭರವಸೆಯೊಂದಿಗೆ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದರು. ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳು, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

Facebook Comments

Sri Raghav

Admin