ಜಾರಕಿಹೊಳಿ ಬ್ರದರ್ಸ್‍ಗೆ ಹೈಕಮಾಂಡ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Jarakihole

ನವದೆಹಲಿ, ಸೆ.15- ರಾಜ್ಯ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಭಿನ್ನಮತದ ಬಗ್ಗೆ ದೆಹಲಿಯಲ್ಲಿಂದು ನಡೆದ ಎಐಸಿಸಿ ಸಮನ್ವಯ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದ್ದು, ಜಾರಕಿ ಹೊಳಿ ಸಹೋದರರ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿದ ಜಾರಕಿ ಹೊಳಿ ಸಹೋದರರ ಅಸಮಾಧಾನದ ಬಗ್ಗೆ ಮತ್ತು ಆನಂತರ ನಡೆದ ಬೆಳವಣಿಗೆಗಳ ಬಗ್ಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಹೈಕಮಾಂಡ್‍ಗೆ ಸಮಗ್ರ ವರದಿ ನೀಡಿದ್ದಾರೆ.

ವರದಿ ಆಧರಿಸಿ ಇಂದು ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆಯನ್ನು ಮುಂದಿಟ್ಟುಕೊಂಡು ಜಾರಕಿ ಹೊಳಿ ಸಹೋದರರು ಪ್ರತಿಷ್ಠೆಗೆ ಬಿದ್ದಿದ್ದು, ಪಕ್ಷಕ್ಕೆ ಹಾನಿ ಉಂಟುಮಾಡುವಂತಹ ನಡವಳಿಕೆಗಳನ್ನು ಪ್ರದರ್ಶಿಸಿದ್ದಾರೆ.
ಚುನಾವಣೆ ಬಳಿಕ ಕೆಲವು ಶಾಸಕರ ಜೊತೆ ಜಾರಕಿ ಹೊಳಿ ಸಹೋದರರು ಚರ್ಚೆ ನಡೆಸಿದ್ದು, ಅದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅನಗತ್ಯವಾಗಿ ಉಂಟಾದ ಈ ಅಸಮಾಧಾನವನ್ನು ಬಗೆಹರಿಸಲು ರಾಜ್ಯದ ಎಲ್ಲಾ ನಾಯಕರು ಮಾತುಕತೆ ನಡೆಸಿದ್ದಾರೆ. ಆದರೆ ಜಾರಕಿ ಹೊಳಿ ಸಹೋದರರು ತಮ್ಮ ಪಟ್ಟನ್ನು ಸಡಿಲಿಸದೆ ರಾಜಕಾರಣವನ್ನು ಮುಂದುವರೆಸಿದ್ದು ಸರಿಯಲ್ಲ ಎಂಬ ಅಸಮಾಧಾನ ವೇಣುಗೋಪಾಲ್ ಅವರ ವರದಿಯಲ್ಲಿ ವ್ಯಕ್ತವಾಗಿದೆ.

ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಕೂಡ ಪ್ರತಿಷ್ಠೆಗೆ ಬಿದ್ದು, ಜಿದ್ದಾಜಿದ್ದಿನ ರಾಜಕಾರಣ ಮಾಡಿದ್ದರಿಂದ ಗೊಂದಲದ ಪರಿಸ್ಥಿತಿ ಉಂಟಾಗಿದ್ದು, ಸದ್ಯಕ್ಕೆ ಎಲ್ಲವೂ ಬಗೆಹರಿದಂತೆ ಕಂಡುಬಂದರೂ ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರ ಕಾರ್ಯಾಚರಣೆಗಳಿಗೆ ಕಾಂಗ್ರೆಸ್ಸೇ ಹಾದಿ ಮಾಡಿಕೊಟ್ಟಂತಾಗುತ್ತಿದೆ. ಸರ್ಕಾರ ಸುಗಮವಾಗಿ ನಡೆಯುವಾಗ ಈ ರೀತಿಯ ಅಪಸ್ವರಗಳಿಗೆ ಅವಕಾಶ ನೀಡಬಾರದೆಂದು ವೇಣುಗೋಪಾಲ್ ವರದಿ ನೀಡಿದ್ದು, ಅದನ್ನು ಆಧರಿಸಿ ಎಐಸಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಹೈಕಮಾಂಡ್ ಮುಂದಿನ ದಿನಗಳಲ್ಲಿ ಇದೇ ಧೋರಣೆ ಮುಂದುವರೆದರೆ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆಯನ್ನು ರವಾನಿಸಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin