ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬುಗೆ ಖುಲಾಯಿಸುತ್ತಾ ಅದೃಷ್ಟ..?

ಈ ಸುದ್ದಿಯನ್ನು ಶೇರ್ ಮಾಡಿ

MLC-Ramesh-Babu

ಬೆಂಗಳೂರು, ಸೆ.15- ರಾಜ್ಯ ವಿಧಾನ ಪರಿಷತ್‍ನ ಮೂರು ಸದಸ್ಯ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು ಅವರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ. ರಮೇಶ್‍ಬಾಬು ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ. ವಿಧಾನ ಪರಿಷತ್‍ನ ಮೂರು ಸದಸ್ಯ ಸ್ಥಾನಗಳಿಗೆ ಅಕ್ಟೋಬರ್ 3ರಂದು ಮತದಾನ ನಡೆಯಲಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ವರಿಷ್ಠರು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಜೆಡಿಎಸ್‍ನಿಂದ ರಮೇಶ್‍ಬಾಬು ಅವರನ್ನು ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಬಹುತೇಕ ಮುಖಂಡರು ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್‍ನಲ್ಲಿ ಯಾವುದೇ ಅಧಿಕೃತ ತೀರ್ಮಾನವಾಗಿಲ್ಲ.  ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಕೂಡ ವಿಧಾನ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸದ್ಯದಲ್ಲೇ ಈ ಸಂಬಂಧ ಪಕ್ಷದ ವರಿಷ್ಠರು ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಪ್ರತ್ಯೇಕ ಅಧಿಸೂಚನೆ:

ವಿಧಾನ ಪರಿಷತ್‍ನ ಮೂರು ಸದಸ್ಯ ಸ್ಥಾನಗಳಿಗೆ ಪ್ರತ್ಯೇಕವಾಗಿ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ.  ವಿಧಾನಸಭೆ ಜಂಟಿ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅಧಿಸೂಚನೆ ಹೊರಡಿಸಿದ್ದಾರೆ. ನಿನ್ನೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಸೆ.22ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಸೆ.24ರಂದು ನಡೆಯಲಿದ್ದು, ನಾಮಪತ್ರಗಳ ವಾಪಸ್‍ಗೆ ಸೆ.26ರವರೆಗೂ ಕಾಲಾವಕಾಶವಿದೆ. ಅ.3ರಂದು ಮತದಾನ ನಡೆಯಲಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‍ನ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.  ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಅವರ ರಾಜೀ ನಾಮೆಯಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.  ಈಶ್ವರಪ್ಪ ಮತ್ತು ಪರಮೇಶ್ವರ್ ಅವರ ಅವಧಿ 2020ರ ಜೂನ್ 30ರ ವರೆಗೂ ಇತ್ತು. ಸೋಮಣ್ಣ ಅವರ ಅವಧಿ 2022ರ ಜೂನ್ 14ರ ವರೆಗೂ ಇತ್ತು.  ಬಾಕಿ ಉಳಿದಿರುವ ಈ ಅವಧಿಗಾಗಿ ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದೆ.

Facebook Comments

Sri Raghav

Admin