ಹೈನುಗಾರಿಕೆ ಉತ್ತೇಜನಕ್ಕೆ ನಬಾರ್ಡ್’ನಿಂದ 440 ಕೋಟಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Nabard-Fund
ಬೆಂಗಳೂರು, ಸೆ.15- ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನ ಜಾರಿಗೆ ತರುತ್ತಿರುವ ಐದು ಯೋಜನೆಗಳಿಗೆ ನಬಾರ್ಡ್ 440 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್ ಅವರು ಡೈರಿ ಪ್ರೊಸೆಸಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಫಂಡ್(ಡಿಐಡಿಎಫ್) ಅನ್ನು ಉದ್ಘಾಟನೆ ಮಾಡಿ ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಮೊದಲ ಕಂತಿನ 440 ಕೋಟಿ ರೂ. ಚೆಕ್ ಅನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‍ಡಿಡಿಬಿ) ಅಧ್ಯಕ್ಷ ದಿಲೀಪ್ ರಾತ್ ಅವರಿಗೆ ಹಸ್ತಾಂತರಿಸಿದರು.

ಈ ಹಣವನ್ನು ಕರ್ನಾಟಕದ ಐದು ಮತ್ತು ಪಂಜಾಬ್‍ನ ಒಂದು ಹಾಲು ಉತ್ಪಾದನಾ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ಕರ್ನಾಟಕದ ಮೈಸೂರು ಹಾಲು ಒಕ್ಕೂಟ, ದಕ್ಷಿಣ ಕನ್ನಡ ಹಾಲು ಒಕ್ಕೂಟ(ಉಡುಪಿ), ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಲಾರ), ಕರ್ನಾಟಕ ಹಾಲು ಒಕ್ಕೂಟ (ರಾಮನಗರ) ಮತ್ತು ಕರ್ನಾಟಕ ಹಾಲು ಒಕ್ಕೂಟ (ಚನ್ನರಾಯಪಟ್ಟಣ) ಹಾಗೂ ಪಂಜಾಬಿನ ರೋಪರ್‍ನ ರೋಪರ್ ಹಾಲು ಒಕ್ಕೂಟದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಈ ಹಣವನ್ನು ವೆಚ್ಚ ಮಾಡಲಾಗುತ್ತದೆ.  ಕರ್ನಾಟಕ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಕೈಗೆತ್ತಿಕೊಂಡಿರುವ ಒಟ್ಟು 1148.58 ಕೋಟಿ ರೂಪಾಯಿಗಳ 15 ಯೋಜನೆಗಳ ಪೈಕಿ ನಬಾರ್ಡ್ ಇದುವರೆಗೆ 843.81 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಪ್ರಸಕ್ತ ಹಣಕಾಸು ಸಾಲಿನ ಅಂತ್ಯದ ವೇಳೆಗೆ ಈ ಮಂಜೂರಾತಿ ಪ್ರಮಾಣ 3800 ಕೋಟಿ ರೂಪಾಯಿಗೆ ತಲುಪಲಿದೆ. 1970 ರ ದಶಕದಲ್ಲಿ ದೇಶದಲ್ಲಿ ಕ್ಷೀರಕ್ರಾಂತಿ ಆರಂಭವಾದ ನಂತರ ಭಾರತ ಸರ್ಕಾರ ಡೈರಿ ಪ್ರೊಸೆಸಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಫಂಡ್(ಡಿಐಡಿಎಫ್) ಅನ್ನು ನಬಾರ್ಡ್‍ನಲ್ಲಿ ಆರಂಭಿಸಿದೆ. ದೇಶದಲ್ಲಿ ಡೈರಿಗಳನ್ನು ಆಧುನೀಕರಣಗೊಳಿಸಲೆಂದು 8004 ಕೋಟಿ ರೂಪಾಯಿಗಳ ನಿಧಿಯನ್ನೂ ಸ್ಥಾಪಿಸಿದೆ.

2017-18 ರಿಂದ 2019-2010 ರ ವೇಳೆಗೆ ಅಂದರೆ ಮೂರು ವರ್ಷಗಳಲ್ಲಿ ಈ ನಿಧಿಯ ಪ್ರಮಾಣ 10,000 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆ ಇದೆ.
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿ ಪ್ರತಿ ವರ್ಷ 176.35 ದಶಲಕ್ಷ ಟನ್‍ನಷ್ಟು ಹಾಲು ಉತ್ಪಾದನೆಯಾಗುತ್ತಿದೆ. 2022 ರ ವೇಳೆಗೆ ಹಾಲು ಉತ್ಪಾದನೆ ಪ್ರಮಾಣ 254.5 ದಶಲಕ್ಷ ಟನ್‍ಗೆ ತಲುಪುವ ನಿರೀಕ್ಷೆ ಇದೆ.  ಈ ಹಿನ್ನೆಲೆಯಲ್ಲಿ ಡಿಐಡಿಎಫ್ ಇಷ್ಟೊಂದು ಪ್ರಮಾಣದ ಹಾಲು ಸಂಸ್ಕರಣೆಗೆ ಅಗತ್ಯವಾದ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ.
ಇದಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಹಾಲು ಉತ್ಪಾದನಾ ಒಕ್ಕೂಟಗಳು ರಾಷ್ಟ್ರೀಯ ಡೈರಿ ಡೆವಲಪ್‍ಮೆಂಟ್  ಬೋರ್ಡ್‍ನಿಂದ (ಎನ್‍ಡಿಡಿಬಿ) ಮತ್ತು ನ್ಯಾಷನಲ್ ಕೋ- ಆಪರೇಟಿವ್ ಡೆವಲಪ್‍ಮೆಂಟ್ ಕಾರ್ಪೋರೇಷನ್ (ಎನ್‍ಸಿಡಿಸಿ)ಯಿಂದ ಪಡೆದುಕೊಳ್ಳಲಿವೆ.  ದೇಶದಲ್ಲಿ ಹೈನುಗಾರಿಕೆ ಅತ್ಯುತ್ತಮವಾಗಿ ಸಾಗುತ್ತಿದ್ದು, ತಲಾ ಒಬ್ಬರಿಗೆ ಪ್ರತಿದಿನ 377 ಗ್ರಾಂ ಹಾಲು ಲಭ್ಯವಾಗುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರ ಆದಾಯವನ್ನು ಹೈನುಗಾರಿಕೆ ಹೆಚ್ಚಿಸುತ್ತಿದೆ.
ಈ ದಿಸೆಯಲ್ಲಿ ಡಿಐಡಿಎಫ್ 50,000 ಗ್ರಾಮಗಳ 95 ಲಕ್ಷಕ್ಕೂ ಅಧಿಕ ಡೈರಿ ರೈತರಿಗೆ ಗಾಂವ್, ಗರೀಬ್ ಮತ್ತು ಕಿಸಾನ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ನೆರವಿನ ಹಸ್ತ ಚಾಚುತ್ತಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ಮಾತನಾಡಿ, ಸಹಕಾರ ಕ್ಷೇತ್ರ ನಮ್ಮ ದೇಶದ ಹೆಮ್ಮೆ. ಈ ಕ್ಷೇತ್ರ ದೇಶದ ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುತ್ತದೆ. ಅದರಲ್ಲೂ ಪ್ರಮುಖವಾಗಿ ರೈತರನ್ನು ಒಟ್ಟುಗೂಡಿಸುತ್ತಿದ್ದು, ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ ಎಂದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನ್ ಧನ್ ಯೋಜನೆಯಿಂದ 32.50 ಕೋಟಿ ಬಡ ಜನರು ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಕೃಷ್ಣ ರಾಜ್ ಮಾತನಾಡಿ, ಹಳ್ಳಿಗಳಲ್ಲಿ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಹಾಲಿಗೆ ಹೆಚ್ಚಿನ ದರವನ್ನು ನೀಡುವ ಮೂಲಕ ಡಿಐಡಿಎಫ್ ಈ ವರ್ಗದವರ ಆದಾಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ ಎಂದರು.

Facebook Comments

Sri Raghav

Admin