ನಾಲ್ವರು ಸುಲಿಗೆಕೋರರ ಸೆರೆ : 5 ಲಕ್ಷ ಬೆಲೆಯ ಕಾರು, ಮೂರು ಬೈಕ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

$-Bike-ANd-car-robbers

ಬೆಂಗಳೂರು, ಸೆ.15- ರಿಂಗ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಬೆಲೆ ಬಾಳುವ ಟಾಟಾ ಇಂಡಿಕಾ ಕಾರು, 3 ದ್ವಿಚಕ್ರ ವಾಹನಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನಾಯಂಡಹಳ್ಳಿಯ ಮನು (22), ವಿನಾಯಕಲೇಔಟ್‍ನ ಹರೀಶ(24), ಆರ್.ಆರ್.ನಗರದ ಶ್ರೀನಿವಾಸ (22) ಮತ್ತು ಬಾಪೂಜಿನಗರದ ಸಂತೋಷ್‍ಕುಮಾರ್ (22) ಬಂಧಿತರು.
ಸೆ.1ರಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಓಲಾ ಕ್ಯಾಬ್ ಚಾಲಕ ಶಿವರಾಜು ಎಂಬುವರು ಚಂದ್ರಾಲೇಔಟ್‍ನ ನಾಗರಬಾವಿ ರಿಂಗ್ ರಸ್ತೆಯ ಬ್ಯಾಟರಿ ಅಂಗಡಿ ಬಳಿ ಕಾರು ನಿಲ್ಲಿಸಿಕೊಂಡು ಮಲಗಿದ್ದಾಗ ಮೂವರು ಸುಲಿಗೆಕೋರರು ಇವರ ಮೇಲೆ ಹಲ್ಲೆ ಮಾಡಿ ಕಾರು ಕಿತ್ತುಕೊಂಡು ಹೋಗಿದ್ದರು. ಅಲ್ಲದೆ ಸೆ.10ರಂದು ರಾತ್ರಿ 10 ಗಂಟೆ ಸಮಯದಲ್ಲಿ ನಾಯಂಡಹಳ್ಳಿಯ ವಿನಾಯಕ ಲೇಔಟ್ ಬಳಿ ಮನು ಎಂಬುವರನ್ನು ಬೆದರಿಸಿ 2800ರೂ. ಸುಲಿಗೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು.

ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸಹಾಯಕ ಪೊಲೀಸ್ ಆಯುಕ್ತರು, ಕೆಂಗೇರಿಗೇಟ್ ಉಪ ವಿಭಾಗದ ಡಾ.ಎಸ್.ಪ್ರಕಾಶ್ ಚಂದ್ರಾಲೇಔಟ್ ಠಾಣೆಯ ಇನ್ಸ್‍ಪೆಕ್ಟರ್ ವೀರೇಂದ್ರ ಪ್ರಸಾದ್, ಪಿಎಸ್‍ಐಗಳಾದ ರವಿಕುಮಾರ್, ಸಂತೋಷ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಸುಲಿಗೆಕೋರರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಸೆ.1ರಂದು ಮಧ್ಯರಾತ್ರಿ ರಾಜರಾಜೇಶ್ವರಿ ನಗರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬಜಾಜ್  ಪಲ್ಸರ್ ಬೈಕನ್ನು ಕಳವು ಮಾಡಿಕೊಂಡು ಹಾಗೂ ಮತ್ತೊಂದು ಬೈಕ್‍ನಲ್ಲಿ ಹೋಗಿ ಬೆಳಗಿನ ಜಾವ ರಿಂಗ್‍ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಒಳಗೆ ಮಲಗಿದ್ದ ಚಾಲಕ ಶಿವರಾಜ್‍ಗೆ ಮಚ್ಚಿನಿಂದ ಹಲ್ಲೆ ನಡೆಸಿ ಕಾರು ಕಿತ್ತುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕೆಂಚೇನಹಳ್ಳಿ ನಿವಾಸಿಯಾದ ರಘು ಮತ್ತು ನಾಯಂಡಹಳ್ಳಿ ನಿವಾಸಿ ಕಿರಣ್ ಎಂಬುವರು ತಲೆ ಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ.

ಆರೋಪಿಗಳು ಗ್ಯಾಂಗ್‍ಕಟ್ಟಿಕೊಂಡು ಮೋಟಾರ್ ಬೈಕ್‍ಗಳಲ್ಲಿ ಸುತ್ತಾಡುತ್ತಾ ಸಾರ್ವಜನಿಕರನ್ನು ಹೆದರಿಸಿ ಹಲ್ಲೆ ಮಾಡಿ ಬೆಲೆ ಬಾಳುವ ವಸ್ತುಗಳು ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗುವ ಪ್ರವೃತ್ತಿವುಳ್ಳವರಾಗಿದ್ದಾರೆ. ಆರೋಪಿ ಮನು ವಿರುದ್ಧ 2017ನೇ ಸಾಲಿನಲ್ಲಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿ ಶ್ರೀನಿವಾಸ್ ವಿರುದ್ಧ 2015ನೇ ಸಾಲಿನಲ್ಲಿ ಆರ್.ಟಿ.ನಗರ ಠಾಣೆಯಲ್ಲಿ ಬೆಳಗೊಡ್ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಬಾಗಿಯಾಗಿರುವುದು ತಿಳಿದು ಬಂದಿದೆ.

Facebook Comments

Sri Raghav

Admin