ಹಾಡಹಗಲೇ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Robbers-In--yalahanka-Polic
ಬೆಂಗಳೂರು, ಸೆ.15-ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ, ಮತ್ತಿತರ ವಸ್ತುಗಳನ್ನು ಡಕಾಯಿತಿ ಮಾಡಿದ್ದ ಮೂವರು ಡಕಾಯಿತರನ್ನು ಬಂಧಿಸಿರುವ ಯಲಹಂಕ ಠಾಣೆ ಪೊಲೀಸರು, 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಮೊಬೈಲ್ ಫೋನ್, 3 ವಾಚ್‍ಗಳು ಮತ್ತು ಕೃತ್ಯಕ್ಕೆ ಬಳಸಿದ್ದ 5 ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಲಹಂಕ ಪುಟ್ಟರಾಜಪ್ಪ ಬ್ಲಾಕ್ ಕೆರೆಕೋಡಿ ರಸ್ತೆ ನಿವಾಸಿ ರಂಜಿತ್ (25), ಯಲಹಂಕದ ರೈತರ ಸಂತೆ ಹತ್ತಿರದ ಅಯ್ಯಪ್ಪ ಟೆಂಪಲ್ ಬಳಿ ನಿವಾಸಿ ರೋಹಿತ್ (25) ಹಾಗೂ ಯಲಹಂಕ ಓಲ್ಡ್ ಟೌನ್ ರಾಮಭಜನೆ ಮಂದಿರದ ಹತ್ತಿರದ ನಿವಾಸಿ ಸುಮಂತ್ (19) ಬಂಧಿತ ಆರೋಪಿಗಳು.  ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಹಾರಿಸಿದ ಗುಂಡು ತಗುಲಿ ಇಬ್ಬರು ಆರೋಪಿಗಳಾದ ಪವನ್ ಕಲ್ಯಾಣ್ (19) ಹಾಗೂ ಉದಯ್ ಶಂಕರ್ (24) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಈ ಡಕಾಯಿತಿ ಪ್ರಕರಣದಲ್ಲಿ ಒಟ್ಟು 7 ಮಂದಿ ಭಾಗಿಯಾಗಿದ್ದಾರೆ.

ಆರೋಪಿಗಳು ಆ.27ರಂದು ಮಧ್ಯಾಹ್ನ 3.45ರ ವೇಳೆಗೆ ಯಲಹಂಕದ ಮಾರುತಿನಗರದ ವಿಕಾಸ್ ಲೇಔಟ್‍ನ 28ನೆ ಕ್ರಾಸ್‍ನ ನಿವಾಸಿ ಪ್ರಣಯ್ ಸಹಾನಿ (34) ಎಂಬವರ ಮನೆಗೆ ನುಗ್ಗಿ ಅಲ್ಲಿದ್ದ ಇಂದ್ರಪಾಲ್ ಸಹಾನಿ, ಹಿರ್ ದಾಯಿ, ಮನೆಗೆಲಸದ ಅಚ್ಚಮ್ಮ ಎಂಬವರನ್ನು ಕಟ್ಟಿ ಹಾಕಿ ಬಾಯಿಗೆ ಗಮ್ ಟೇಪ್ ಅಂಟಿಸಿ ಕೂಡಿಹಾಕಿದ್ದರು. ಮನೆಯಲ್ಲಿದ್ದ ಚಿನ್ನಾ ಭರಣ, ಇತರ ವಸ್ತುಗಳನ್ನು ಡಕಾಯಿತಿ ಮಾಡುತ್ತಿದ್ದರು.  ಆ ಸಂದರ್ಭದಲ್ಲಿ ಮನೆಗೆ ಬಂದ ಪ್ರಣಯ್ ಸಹಾನಿ ಅವರು ದರೋಡೆಕೋರರ ಪೈಕಿ ಓರ್ವನನ್ನು ಹಿಡಿಯಲು ಹೋದಾಗ ಆತ ಸಹಾನಿ ಅವರ ಎದೆಗೆ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಇತರರಿಗೂ ಇರಿದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆತ ನೀಡಿದ ಮಾಹಿತಿಯಂತೆ ಇನ್ನು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 1.5 ಲಕ್ಷ ರೂ.ಮೌಲ್ಯದ ಆಭರಣ, 2 ಮೊಬೈಲ್ ಫೋನ್‍ಗಳು, 3 ವಾಚ್‍ಗಳು, ಕೃತ್ಯಕ್ಕೆ ಬಳಸಿದ 5 ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ 25 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಅಟ್ಟಿಕಾ ಗೋಲ್ಡ್ ನಲ್ಲಿ ಆರೋಪಿ ರೋಹಿತ್‍ನ ತಾಯಿ ಇಟ್ಟಿದ್ದು, ಆ ಒಡವೆಗಳನ್ನು ವಶಪಡಿ ಸಿಕೊಳ್ಳಲು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin