ತಾಂತ್ರಿಕ ಶಿಲ್ಪಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Vishsweswarayya

– ಪ್ರಶಾಂತ್‍ಕುಮಾರ್ ಎ.ಪಿ.

ಸಾಧನೆಯ ಪತಾಕೆಯನ್ನು ದಿಗಂತಕ್ಕೆ ಏರಿಸಿದ ನಮ್ಮ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅಪ್ರತಿಮರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಕಡು ಬಡ ಕುಟುಂಬದಲ್ಲಿ 15 ಸೆಪ್ಟೆಂಬರ್ 1861ರಂದು ಜನಿಸಿ, ಇಡೀ ಪ್ರಪಂಚವೇ ತನ್ನತ್ತ ನಿಬ್ಬೆರಗಾಗಿ ನೋಡುವಂತೆ ಸಾಧನೆಗೈದ ತಂತ್ರಜ್ಞಾನಿ, ಶ್ರೇಷ್ಠ ಆಡಳಿತಗಾರ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದರೆ ತಪ್ಪಾಗದು.

ಸತತ ಪರಿಶ್ರಮ, ಶಿಸ್ತು, ಶ್ರೇಷ್ಠ ನಡವಳಿಕೆ, ಸಾಧನೆ, ತಾಯ್ನಾಡಿಗಾಗಿ ಬದುಕು, ಈ ಎಲ್ಲ ಸಂಸ್ಕಾರಯುತ ಮೌಲ್ಯಗಳನ್ನು ಒಬ್ಬನೇ ವ್ಯಕ್ತಿಯಲ್ಲಿ ಕಾಣಬಹುದಾದರೆ ಅದು ಸರ್ ಎಂವಿಯವರಲ್ಲಿ ಮಾತ್ರವೇ. ಅವರು ತೋರಿದ ಪ್ರಾಮಾಣಿಕತೆ, ಸರಳತೆ, ಶಿಸ್ತಿನಲ್ಲಿ ಶೇ.1 ಭಾಗವನ್ನಾದರೂ ಇಂದಿನ ಅಧಿಕಾರಿಗಳು, ಅಧಿಕಾರ ಶಾಹಿಗಳು ಅನುಸರಿಸಿದರೆ ಕನ್ನಡನಾಡು ಮತ್ತು ಭಾರತ ದೇಶ ಮಿಂಚಿನ ವೇಗದಲ್ಲಿ ಸ್ವರ್ಗಕ್ಕೆ ಸಮನಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಶತಾಯುಷಿ ಸರ್ ಎಂ. ವಿಶ್ವೇಶ್ವರಯ್ಯನವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ದುಡಿದವರಲ್ಲ ಎಂಬುದು ಅವರ ಸಾಧನೆಗಳಲ್ಲಿಯೇ ಗೋಚರವಾಗುತ್ತದೆ. ಏಕೆಂದರೆ, ಅವರು ಕಟ್ಟಿದ್ದು ಕೇವಲ ಒಂದು ಉದ್ದಿಮೆಯನ್ನಲ್ಲ, ಒಂದು ಸಂಸ್ಥೆಯನ್ನಲ್ಲ, ಒಂದು ನೀರಾವರಿ ಯೋಜನೆಯನ್ನಲ್ಲ. ಅವರ ಅಹರ್ನಿಶಿ ಸೇವೆ ಯಾವುದೇ ಒಂದು ಸಮುದಾಯ ಅಥವಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ ಎಂಬುದು ವಿಶೇಷ. ಹೀಗಾಗಿಯೇ, ಇಂದಿಗೂ ಮೈಸೂರು ವಿಶ್ವವಿದ್ಯಾನಿಲಯದ ಜ್ಞಾನ ಭಂಡಾರದ ಜ್ಯೋತಿ, ಮೈಸೂರು ಬ್ಯಾಂಕ್‍ನ ಅದ್ಭುತ ಬೆಳವಣಿಗೆ, ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳ ಯಂತ್ರಗಳ ಸದ್ದು, ಮೈಸೂರು ಗಂಧದೆಣ್ಣೆ ಹಾಗೂ ಸೋಪಿನ ಪರಿಮಳ, ಇವೆಲ್ಲವೂ ನಾವು ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆಗಳ ಸ್ಮಾರಕಗಳು ಎಂದು ಸ್ಮರಿಸುವಂತಾಗಿದೆ.

ರೈತನೇ ದೇಶದ ಬೆನ್ನೆಲುಬು. ಅವರಿಗೆ ಹಾನಿಯಾದರೆ ದೇಶ ಉಳಿಯುವುದಿಲ್ಲ ಎಂದು ಬಲವಾಗಿ ನಂಬಿದ್ದವರು ವಿಶ್ವೇಶ್ವರಯ್ಯನವರು. ರೈತರಿಗೆ ನೀರಿಲ್ಲದೆ ಕಾಯಕವಿಲ್ಲ ಎಂದು ಪರಿಪೂರ್ಣವಾಗಿ ಅರ್ಥೈಸಿಕೊಂಡಿದ್ದ ಸರ್‍ಎಂವಿ ಅವರು ರೈತರಿಗಾಗಿಯೇ ಬ್ಲಾಕ್ ಸಿಸ್ಟಂ ಎಂಬ ಯೋಜನೆ ಜಾರಿಗೆ ತಂದರು. ಈ ಮೂಲಕ ನೀರನ್ನು ರೈತರು ಸಮರ್ಪಕ ಹಾಗೂ ಸಾರ್ಥಕವಾಗಿ ಬಳಸಿಕೊಳ್ಳಲು ಕಾರಣರಾದರು. ಈ ಯೋಜನೆ ಅಂದಿನ ಕಾಲದಲ್ಲಿಯೇ ಬಹಳ ಮನ್ನಣೆ ಪಡೆದಿತ್ತು.
ನೀರಿನ ಒಂದು ಹನಿಯು ಪೋಲಾಗಬಾರ ದೆಂಬ ವಿಶಿಷ್ಟ ಕಾಳಜಿ ಹೊಂದಿದ್ದ ಅವರು ಜೋಗ ಜಲಪಾತದಲ್ಲಿ 300 ಅಡಿಗಳಿಂದ ಧುಮ್ಮಿಕ್ಕುವ ಶರಾವತಿ ನದಿಯ ಜಲಧಾರೆಯನ್ನು ನೋಡಿ ಒಹ್! ಎಷ್ಟೊಂದು ನೀರು ಪೋಲಾಗುತ್ತಿದೆ ಎಂದು ಉದ್ಗರಿಸಿದ್ದು. ಆಗಿನ ಕಾಲದಲ್ಲೇ ವಿಶ್ವೇಶ್ವರಯ್ಯನವರಿಗೆ ಜಲಶಕ್ತಿಯ ಅಮೂಲ್ಯತೆ ಮತ್ತು ಪ್ರಚಂಡತೆ ತಿಳಿದಿದ್ದಿತು. ಇದರಿಂದಲೇ ಅಲ್ಲವೇ, ನಮ್ಮ ಬೆಂಗಳೂರು ನಗರ ಏಷ್ಯಾ ಖಂಡದಲ್ಲಿಯೇ ಪ್ರಥಮ ಬಾರಿಗೆ ವಿದ್ಯುಚ್ಛಕ್ತಿಯನ್ನು ಪಡೆದ ನಗರ ಎಂದು ಪ್ರಸಿದ್ಧವಾಗಿರುವುದು. 1883ರಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲಮೋದಲ್ಲಿ ರ್ಯಾಂಕ್ ಪಡೆಯುವ ಮೂಲಕ ಸಾಧನೆಯ ಪರ್ವ ಆರಂಭಿಸಿದ ಸರ್‍ಎಂವಿ ಅವರು ತಮ್ಮ ತಂತ್ರಜ್ಞಾನ, ಕುಶಲತೆ ಮತ್ತು ಕಾರ್ಯವೈಖರಿ ಬಗ್ಗೆ ಸರ್ಕಾರಕ್ಕೆ ತೋರಿಸುವ ಮೂಲಕ ಇಡೀ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದರು.

ತಮ್ಮ ವಿಶಿಷ್ಟ ಆಲೋಚನೆ, ತಂತ್ರಜ್ಞಾನವನ್ನು ಅಳವಡಿಸಿ ಪ್ರಪಂಚಕ್ಕೆ ಮೊದಲಿಗೆ ಆಣೆಕಟ್ಟು ವಿನ್ಯಾಸ ತೋರಿಸಿಕೊಟ್ಟಂತಹ ಏಕೈಕ ತಂತ್ರಜ್ಞಾನಿ ಸರ್‍ಎಂವಿ ಅವರು.  ಸರ್‍ಎಂವಿ ಅವರು ರೈತರು ಹಾಗೂ ಸಮಾಜದ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ ಇವರ ಹೆಸರಿನಲ್ಲಿರುವ ಅನೇಕ ವಿದ್ಯಾಸಂಸ್ಥೆಗಳು ಸರ್‍ಎಂವಿ ಅವರ ಸಾಧನೆಗೆ ಹಿಡಿದ ಕೈಗನ್ನಡಿಗಳಾಗಿವೆ.  ಸರ್‍ಎಂವಿ ಅವರ ಬುದ್ಧಿಶಕ್ತಿಗೆ ತಲೆದೂಗಿದ ಬ್ರಿಟಿಷರು 1915ರಲ್ಲಿ ಸರ್ ಪ್ರಶಸ್ತಿ ನೀಡಿದರೆ, ಸ್ವತಂತ್ರ್ಯ ಭಾರತವು 1955ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಿದೆ. ಭಾರತ ಸರ್ಕಾರ ಸರ್‍ಎಂವಿ ಭಾವ ಚಿತ್ರವಿರುವ ಅಂಚೆ ಚೀಟಿಯನ್ನು ಹೊರತಂದಿದೆ. ದೇಶದ ನಾನಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವ ಸಲ್ಲಿಸಿವೆ.  ಕನ್ನಡದ ಹಿರಿಮೆಯನ್ನು ಹಿಮಾಲಯದೆತ್ತರಕ್ಕೆ ಹಾರಿಸಿದ ಸಾಧಕರು ಇವರು. ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಕನ್ನಡಾಂಬೆಯ ಈ ವರಪುತ್ರನ ಆದರ್ಶಗಳೇ ಸಾರ್ವಕಾಲಿಕ ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಮಹಾನ್ ಪುರುಷನ ತತ್ವ, ಆದರ್ಶಗಳನ್ನು ಯುವಜನತೆ ಬದುಕಿನಲ್ಲಿ ಅಳವಡಿಸಿಕೊಳ್ಳು ವುದೇ ನಾವು ಅವರಿಗೆ ನೀಡುವ ಗೌರವ.

Facebook Comments

Sri Raghav

Admin