ಫಾರಿನ್’ಗೆ ಹೋಗಿ ಬಂದ ಸಿದ್ದರಾಮಯ್ಯನವರ ಕಾಲೆಳೆದ ವೇಣುಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah---011

ಬೆಂಗಳೂರು,ಸೆ.16- ವಿದೇಶ ಪ್ರವಾಸಕ್ಕೆ ಹೋಗಿ ತೂಕ ಇಳಿಸಿಕೊಂಡಿ ದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾತಿಗೆಳೆದರು. ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂದರ್ಭದಲ್ಲಿ ವಿದೇಶ ಪ್ರವಾಸದಿಂದ ಮರಳಿದ ಬಳಿಕ ಎಷ್ಟು ಲವಲವಿಕೆಯಿಂದ ಇದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಾಂಗ್ರೆಸ್‍ನಲ್ಲಿನ ಆಂತರಿಕ ಭಿನ್ನಮತ, ಸಂಪುಟ ರಚನೆ, ನಿಗಮ ಮಂಡಳಿಗಳ ನೇಮಕ, ಸಮನ್ವಯ ಸಮಿತಿ ಸಭೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯನವರ ನಿವಾಸ ಕಾವೇರಿಗೆ ಆಗಮಿಸಿದಾಗ ವೇಣುಗೋಪಾಲ್ ಈ ರೀತಿ ಹಾಸ್ಯ ಚಟಾಕಿ ಹಾರಿಸಿದರು.  ಆಗ ನಗುನಗುತ್ತಲೇ ಮಾತನಾಡಿದ ಸಿದ್ದರಾಮಯ್ಯ ಅವರು ತೂಕ ಇಳಿಸಿಕೊಂಡಿಲ್ಲ. ಇನ್ನು ಒಂದು ಕೆಜಿ ಹೆಚ್ಚಾಗಿದ್ದೇನೆ ಎಂದು ಪ್ರತಿಕ್ರಿಯಿಸಿದರು.

# ಎಲ್ಲದಕ್ಕೂ ನಾನೇ ಕಾರಣಾನಾ..? : ಅಸಮಾಧಾನ ಹೊರಹಾಕಿದ ಸಿದ್ದು
ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನಕ್ಕೆ ನಾನೇ ಕಾರಣ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿದ್ದ ಸಭೆಯಲ್ಲಿ ಸಿದ್ದರಾಮಯ್ಯನವರು ತಮ್ಮ ವಿರುದ್ಧದ ಆರೋಪದ ಹಿಂದೆ ನಮ್ಮವರೇ ಇದ್ದಂತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನವರ ಅಸಮಾಧಾನವನ್ನು ಗಮನಿಸಿದ ವೇಣುಗೋಪಾಲ್ ಅವರು ಮಾಧ್ಯಮಗಳು ಸೃಷ್ಟಿ ಮಾಡಿರುವುದೇ ಹೊರತು ಈ ಬಗ್ಗೆ ಕಾಂಗ್ರೆಸ್ ಪಕ್ಷದ ಯಾರೂ ಕೂಡ ಮಾತನಾಡಿಲ್ಲ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.  ನಮ್ಮ ಪಕ್ಷದವರು ನಿಮ್ಮ ಮೇಲೆ ಆರೋಪ ಹೊರಿಸುವಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಸಿದ್ದರಾಮಯ್ಯನವರ ಬೇಸರವನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಆ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದನ್ನು ಎಂದೂ ಮರೆಯುವುದಿಲ್ಲ. ಸರ್ಕಾರ ಅಸ್ಥಿರಗೊಳಿಸುವಂತಹ ಪ್ರಯತ್ನಕ್ಕೆ ನಾನು ಬೆಂಬಲ ನೀಡುವುದಿಲ್ಲ. ಅಂತಹ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ತಮ್ಮ ವಿರುದ್ದ ಇಂಥದೊಂದು ಆರೋಪ ಪಕ್ಷದೊಳಗೆ ಕೇಳಿಬರದಂತೆ ನೋಡಿಕೊಳ್ಳಬೇಕಲ್ಲವೆ ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದ್ದಾರೆ.
ಮಾಧ್ಯಮಗಳಲ್ಲಿ ಬಿತ್ತರವಾಗಿರುವುದನ್ನು ಕೆಲವರು ತಮ್ಮ ಗಮನಕ್ಕೂ ತಂದಿದ್ದರು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಭೆಯಲ್ಲಿದ್ದ ನಾಯಕರು ಪ್ರಸ್ತಾಪಿಸಿದ ವಿಷಯಗಳನ್ನು ಆಲಿಸಿದ ಸಿದ್ದರಾಮಯ್ಯನವರು, ಸಂಪುಟ ವಿಸ್ತರಣೆ ಬಗ್ಗೆ ಇನ್ನೆರಡು ದಿನ ಬಿಟ್ಟು ಚರ್ಚಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‍ನ ಆಂತರಿಕ ಭಿನ್ನಮತ, ವಿಧಾನಪರಿಷತ್‍ಗೆ ಅಭ್ಯರ್ಥಿಗಳ ಆಯ್ಕೆ, ಅತೃಪ್ತ ಶಾಸಕರ ವಿಚಾರ, ಆಪರೇಷನ್ ಕಮಲ ಸೇರಿದಂತೆ ಬಹಳಷ್ಟು ವಿಚಾರಗಳ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin