ಶಾಸಕರು ‘ಕೈ’ಕೊಡದಂತೆ ಕಾಯಲು ವಿಶೇಷ ತಂಡ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah--01

ಬೆಂಗಳೂರು, ಸೆ.16- ಜೆಡಿಎಸ್-ಕಾಂಗ್ರೆಸ್‍ನ ಶಾಸಕರು ಬಿಜೆಪಿಯ ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ತಡೆಯಲು ವಿಶೇಷ ತಂಡ ರಚಿಸುವ ಕುರಿತು ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಹನ್ನೆರಡು ದಿನಗಳಿಂದ ವಿದೇಶಿ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಇಂದು ಬೆಳಗ್ಗೆ ಕಾಂಗ್ರೆಸ್ ಮುಖಂಡರ ಜತೆ ಮಹತ್ವದ ಸಭೆಗಳನ್ನು ನಡೆಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣು ಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಅವರುಗಳು ಬೆಳಗ್ಗೆ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಸಭೆ ನಡೆಸಿದರು.  ಅದರ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಎಲ್ಲ ಪಕ್ಷಗಳಲೂ ಅತೃಪ್ತ ಶಾಸಕರಿದ್ದಾರೆ. ಇದರ ಲಾಭ ಪಡೆದ ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದ್ದಾರೆ. ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ವಿಶೇಷ ತಂಡ ರಚಿಸಬೇಕು.

ಅದೇ ರೀತಿ ಬಿಜೆಪಿಗೆ ತಿರುಗೇಟು ನೀಡಲು ಬಿಜೆಪಿ ಶಾಸಕರನ್ನು ಸೆಳೆಯಲು ಮತ್ತೊಂದು ತಂಡ ರಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ತಂಡಗಳ ಕಾರ್ಯಾಚರಣೆಗೆ ಅಗತ್ಯವಾದ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡಲು ಎಲ್ಲರೂ ಸಹಕರಿಸಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿ ಬಂದಿವೆ.

ಬಿಜೆಪಿಯವರು ಕಾಂಗ್ರೆಸ್-ಜೆಡಿಎಸ್‍ನ 20 ಶಾಸಕರನ್ನು ಸೆಳೆದರೆ, ಅದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್‍ನವರು ಬಿಜೆಪಿಯ ಅತೃಪ್ತ ಶಾಸಕರನ್ನು ಸೆಳೆಯಬೇಕು ಎಂಬ ಚರ್ಚೆಗಳು ನಡೆದಿವೆ. ಬಿಜೆಪಿ ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ ಮತ್ತು ಡಿಕೆಶಿ ನೇತೃತ್ವದಲ್ಲಿ ಕಾರ್ಯಾಚರಣೆಗಳು ನಡೆದರೆ, ಕಾಂಗ್ರೆಸ್-ಜೆಡಿಎಸ್‍ನಿಂದ ಹೊರ ಹೋಗುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಿದ್ದರಾಮಯ್ಯ ನೇತೃತ್ವದ ತಂಡ ಕೆಲಸ ಮಾಡಬೇಕೆಂಬ ಸಲಹೆಗಳು ಕೇಳಿ ಬಂದಿವೆ.

Facebook Comments

Sri Raghav

Admin