ಸಚಿವ ಸಂಪುಟ ವಿಸ್ತರಣೆ ಕುರಿತು ವೇಣುಗೋಪಾಲ್ ಜೊತೆ ಸಿಎಂ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Venugopal--01

ಬೆಂಗಳೂರು, ಸೆ.16- ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ನಿನ್ನೆ ತಡರಾತ್ರಿ ಕೆ.ಸಿ.ವೇಣುಗೋಪಾಲ್ ಅವರ ಜತೆ ಚರ್ಚೆ ಮಾಡಿರುವ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಕಿ ಇರುವ ಸಂಪುಟ ಸ್ಥಾನಗಳನ್ನು ಭರ್ತಿ ಮಾಡಬೇಕು. ನಿಗಮ ಮಂಡಳಿಗಳನ್ನು ನೇಮಕ ಮಾಡಬೇಕಾದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಾಂಗ್ರೆಸ್ ವಲಯದಲ್ಲಿನ ಆಂತರಿಕ ಭಿನ್ನಮತಗಳಿಂದ ಸರ್ಕಾರದ ಅಸ್ಥಿರತೆಯ ವದಂತಿಗಳು ಹೆಚ್ಚಾಗುತ್ತಿವೆ. ಇದರಿಂದ ಆಡಳಿತದ ಮೇಲೂ ಅಡ್ಡಪರಿಣಾಮವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರ ರಚಿಸಲಾಗಿದೆ. ಆದರೆ, ರಾಜಕೀಯ ಗೊಂದಲಗಳಿಂದ ಇಲ್ಲಿ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಹೀಗಾದರೆ ಜನ ನಮ್ಮ ಮೇಲಿಟ್ಟಿದ್ದ ನಿರೀಕ್ಷೆಗಳು ಹುಸಿಯಾಗುತ್ತವೆ. ಜೆಡಿಎಸ್ ಪಾಳಯದಲ್ಲಂತೂ ಯಾವುದೇ ಅಸಮಾಧಾನಗಳಿಲ್ಲ. ಕಾಂಗ್ರೆಸ್ ಶಾಸಕರು ದಿನೇ ದಿನೇ ಒಂದೊಂದು ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಒಂದಷ್ಟು ದಿನ ಭಿನ್ನಮತೀಯ ಚಟುವಟಿಕೆಗಳು ನಡೆದಿತ್ತು.

ಈಗ ಬೆಳಗಾವಿಯ ಜಾರಕಿಹೊಳಿ ಸಹೋದರರು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಎಲ್ಲಾ ಗೊಂದಲಗಳ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿದೆ. ಈ ರೀತಿಯ ತೆರೆ ಮರೆಯ ಆಟಗಳು ಬೇಡ. ಇಷ್ಟ ಇದ್ದರೆ ಸರ್ಕಾರ ಮುನ್ನಡೆಸಿ. ಇಲ್ಲವಾದರೆ ನೇರವಾಗಿ ಹೇಳಿ. ಬಲವಂತವಾಗಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯ ನಮಗೂ ಇಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯವರು ಆಪರೇಷನ್ ಕಮಲ ಮಾಡಿ ತೊಂದರೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‍ನವರು ಒಳಗೊಳಗೆ ನಡೆಸುತ್ತಿರುವ ಕುತಂತ್ರಗಳೇ ದೊಡ್ಡ ಸಮಸ್ಯೆಯಾಗಿದೆ. ನಿಮ್ಮ ನಾಯಕರ ಸಭೆ ನಡೆಸಿ ಚರ್ಚೆ ಮಾಡಿ. ಅಗತ್ಯ ಬಿದ್ದರೆ ನಾನೂ ಸಭೆಗೆ ಬರುತ್ತೇನೆ. ಒಮ್ಮತದ ನಿರ್ಣಯ ತೆಗೆದುಕೊಂಡು ಸರ್ಕಾರದ ಅಸ್ಥಿರತೆಗೆ ಶಾಶ್ವತ ಬ್ರೇಕ್ ಹಾಕೋಣ. ಮುಂದಿನ ಐದು ವರ್ಷ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರೆ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯ. ಇಲ್ಲವಾದರೆ ಜನ ನಮ್ಮ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಅದರ ಪರಿಣಾಮ 2019ರ ಲೋಕಸಭೆ ಚುನಾವಣೆ ಮೇಲೆ ಆಗುತ್ತದೆ ಎಂದು ಕುಮಾರಸ್ವಾಮಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಅವರ ಮಾತುಗಳಿಗೆ ವೇಣುಗೋಪಾಲ್ ಬಹುತೇಕ ಸಹಮತ ವ್ಯಕ್ತಪಡಿಸಿದ್ದು, ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿಯ ಆಪರೇಷನ್ ಕಮದಲ ಹಿಂದೆ ಯಾರೆಲ್ಲಾ ಇದ್ದಾರೆ. ಕಾಂಗ್ರೆಸ್ ನಾಯಕರ ಜತೆ ಬಿಜೆಪಿ ನಾಯಕರು ಯಾವ ಹಂತದ ಮಾತುಕತೆ ನಡೆಸಿದ್ದಾರೆ ಎಂಬೆಲ್ಲಾ ವಿವರಗಳು ಸಭೆಯಲ್ಲಿ ಚರ್ಚೆಯಾಗಿದೆ.

Facebook Comments

Sri Raghav

Admin