ಹಲವು ಕಾಂಗ್ರೆಸ್ ಶಾಸಕರ ಮೊಬೈಲ್ ನಾಟ್ ರೀಚಬಲ್..!

ಈ ಸುದ್ದಿಯನ್ನು ಶೇರ್ ಮಾಡಿ

Congress
ಬೆಂಗಳೂರು, ಸೆ.16- ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸೆ.20 ದಿನಾಂಕ ನಿಗದಿಪಡಿಸಿರುವ ಬೆನ್ನಲ್ಲೇ ಮೈತ್ರಿ ಕೂಟದ ಹಲವು ಶಾಸಕರ ಮೊಬೈಲ್ ನಾಟ್ ರೀಚಬಲ್ ಆಗಿರುವುದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬಳ್ಳಾರಿಯ ಗಣಿಧಣಿಗಳು ಕಂಟಕಪ್ರಾಯರಾಗಿದ್ದರು. ಈಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಳ್ಳಾರಿ ಮತ್ತು ಬೆಳಗಾವಿಯ ಉದ್ಯಮಿ ಕುಟುಂಬಗಳು ಕಂಟಕಪ್ರಾಯವಾಗುತ್ತಿರುವುದು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿಯ ಜಾರಕಿಹೊಳಿ ಸಹೋದರರು ಬಂಡಾಯ ಸಾರಿದ ಬೆನ್ನಲ್ಲೇ ಬಳ್ಳಾರಿಯಲ್ಲೂ ಸರ್ಕಾರದ ಪತನಕ್ಕೆ ಕಾರ್ಯಚಟುವಟಿಕೆಗಳು ಪ್ರಾರಂಭಗೊಂಡಿವೆ. ಬಳ್ಳಾರಿ ಜಿಲ್ಲೆಯ ಶಾಸಕರಾದ ಆನಂದ್‍ಸಿಂಗ್, ನಾಗೇಂದ್ರ ಮತ್ತು ಗಣೇಶ್ ಅವರು ಯಾರ ಸಂಪರ್ಕಕ್ಕೂ ಸಿಗದೆ ಕಾಂಗ್ರೆಸ್‍ನಿಂದ ದೂರ ಉಳಿದಿದ್ದಾರೆ. ಅವರ ಜತೆ ಪ್ರತಾಪ್‍ಗೌಡ ಪಾಟೀಲ್, ತುಕಾರಾಮ್ ಅವರುಗಳು ಬಿಜೆಪಿಯವರ ಜತೆ ನಿರಂತರವಾಗಿ ಸಂಪರ್ಕದಲ್ಲಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಮೂವರು ಶಾಸಕರು ಕಾಂಗ್ರೆಸ್ ನಾಯಕರ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಇದೆ. ಇದು ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವಂತಿದ್ದು, ಮುಂದಿನ ರಾಜಕೀಯ ಚಟುವಟಿಕೆಗಳು ಬಿರುಸುಪಡೆದುಕೊಂಡಿವೆ.ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ತುಮಕೂರಿನ ಸಿದ್ದಗಂಗ ಮಠಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಬಂದಿದ್ದಾರೆ.

ಇತ್ತ ಕಾಂಗ್ರೆಸ್‍ನಲ್ಲಿ ವಿದೇಶ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರಿಗಿಂತಲೂ ಮೊದಲೇ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಿದ್ದಾರೆ. ಇಂದು ಬೆಳಗ್ಗೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಜತೆಯೂ ಚರ್ಚಿಸಿದ್ದಾರೆ. ಈ ನಡುವೆ ಬಿಜೆಪಿಯವರ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಅವರುಗಳು ನಿರಂತರ ಪ್ರಯತ್ನ ಮಾಡುತ್ತಿದ್ದು, ಶಾಸಕರ ಕುಟುಂಬ ಸದಸ್ಯರನ್ನೂ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಮಧ್ಯೆ ಆಪರೇಷನ್ ಕಮಲಕ್ಕೆ ಬಿಜೆಪಿಯ ಕೇಂದ್ರದ ಸಚಿವರೂ ಕೂಡ ಕೈ ಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ರಾಜ್ಯ ನಾಯಕರು ಮಾತ್ರ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸರ್ಕಾರ ರಚಿಸುವ ಪ್ರಯತ್ನ ನಡೆಸುತ್ತಿದ್ದರು. ಆದರೆ, ಈಗ ಕೇಂದ್ರದ ಬಿಜೆಪಿ ನಾಯಕರೂ ಇದಕ್ಕೆ ಸಾಥ್ ನೀಡುತ್ತಿರುವುದರಿಂದ ಕಾಂಗ್ರೆಸ್‍ನಲ್ಲಿ ಸಂಚಲನ ಉಂಟಾಗಿದೆ. ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಬಿಜೆಪಿಗೆ ಸಹಕಾರ ನೀಡಲು ಒಪ್ಪಿದ್ದರಾದರೂ ಬಿಜೆಪಿಯಲ್ಲಿ ನಮ್ಮ ಸ್ಥಾನಮಾನವೇನು ಎಂಬ ಬಗ್ಗೆ ಖಚಿತ ಭರವಸೆ ಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು.

ರಾಜ್ಯದ ನಾಯಕರು ನೀಡುವ ಯಾವುದೇ ಭರವಸೆಗಳನ್ನು ನಂಬಿ ಬಿಜೆಪಿ ಸೇರಲು ಸಾಧ್ಯವಿಲ್ಲ. ಕೇಂದ್ರದ ವರಿಷ್ಠರು ಸ್ಪಷ್ಟ ಭರವಸೆ ನೀಡಿದರೆ ಮಾತ್ರ ಪರಿಗಣಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಈಗ ಬಿಜೆಪಿಯ ಹೈಕಮಾಂಡ್ ಕೆಲವು ಕೇಂದ್ರ ಸಚಿವರನ್ನು ಅಖಾಡಕ್ಕಿಳಿಸಿದೆ ಎನ್ನಲಾಗಿದೆ. ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದರಿರುವ ಕಾಂಗ್ರೆಸ್‍ನ ಶಾಸಕರ ಜತೆ ಕೇಂದ್ರ ಸಚಿವರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಹಲವಾರು ಶಾಸಕರು ತಮ್ಮ ಪಕ್ಷದ ಮುಖಂಡರ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಒಂದು ಮೂಲದ ಪ್ರಕಾರ ಕಾಂಗ್ರೆಸ್‍ನ ಸುಮಾರು 20 ಮಂದಿ ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದು, ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin