ಅನಾರೋಗ್ಯದಿಂದ ಟೈಲರ್ ಸಾವು, ಮನನೊಂದು ಪತ್ನಿ ಹಾಗೂ ತಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಬೆಂಗಳೂರು, ಸೆ.16- ಅನಾರೋಗ್ಯದಿಂದ ಟೈಲರೊಬ್ಬರು ಸಾವನ್ನಪ್ಪಿದ್ದರಿಂದ ಮನನೊಂದು ಅವರ ಪತ್ನಿ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುತ್ಯಾಲನಗರದ 18ನೆ ಕ್ರಾಸ್, 12ನೆ ಎಫ್ ಮೈನ್ ನಿವಾಸಿಗಳಾದ ಶೇಷಪಾಣಿ (44) ಅನಾರೋಗ್ಯದಿಂದ ಮೃತಪಟ್ಟ ಟೈಲರ್. ಅವರ ಪತ್ನಿ ಉಷಾ ನಂದಿನಿ (42) ಹಾಗೂ ತಾಯಿ ಲಕ್ಷ್ಮೀ ದೇವಿ (65) ಆತ್ಮಹತ್ಯೆ ಮಾಡಿಕೊಂಡ ಅತ್ತೆ ಮತ್ತು ಸೊಸೆ.

ಮೂಲತಃ ಆಂಧ್ರಪ್ರದೇಶದ ಈ ಕುಟುಂಬ ಟೈಲರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಶೇಷಪಾಣಿ ಮತ್ತು ಉಷಾ ನಂದಿನಿ ದಂಪತಿಗೆ ಮಕ್ಕಳಿರಲಿಲ್ಲ. ಮೂವರು ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಶೇಷಪಾಣಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲೇ ಮೃತಪಟ್ಟಿದ್ದಾರೆ. ಶೇಷಪಾಣಿ ಅವರ ನಿಧನದ ಸುದ್ದಿಯನ್ನು ಯಾರಿಗೂ ತಿಳಿಸಿರಲಿಲ್ಲ. ಮೃತದೇಹ ಮನೆಯಲ್ಲೇ ಇತ್ತು. ಅವರ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಪತ್ನಿ ಮತ್ತು ತಾಯಿ, ದಿಕ್ಕುತೋಚದಂತಾಗಿ ಅದೇ ಮನೆಯಲ್ಲಿ ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಿಂದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ನಿನ್ನೆ ಈ ಬಗ್ಗೆ ಯಶವಂತಪುರ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲಿಸಿದಾಗ ಮೂವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಈ ಬಗ್ಗೆ ಪರಿಶೀಲಿಸಿದಾಗ ಶೇಷಪಾಣಿ ಅವರು ಅನಾರೋಗ್ಯದಿಂದ ಮೃತಪಟ್ಟಿರುವುದು ಹಾಗೂ ಅತ್ತೆ ಮತ್ತು ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಆಂಧ್ರಪ್ರದೇಶದಲ್ಲಿರುವ ಅವರ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ.  ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಡಿಸಿಪಿ ಚೇತನ್‍ಸಿಂಗ್ ರಾಥೋರ್ ಅವರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin