ಶ್ರೀಮಂತರಿಂದ ಹಣ ಪಡೆದು ಬಡವರಿಗೆ ಸಾಲ ನೀಡಿ : ರಾಜ್ಯಪಾಲ ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

Governer--021

ಬೆಂಗಳೂರು, ಸೆ.16- ಶ್ರೀಮಂತರಿಂದ ಹಣ ಪಡೆದು ಬಡವರಿಗೆ ಸಾಲದ ರೂಪದಲ್ಲಿ ಸಹಾಯ ಮಾಡುವುದೇ ಸಹಕಾರಿ ಕ್ಷೇತ್ರದ ಆದ್ಯತೆಯಾಗಬೇಕು ಎಂದು ರಾಜ್ಯಪಾಲ ವಜೂಬಾಯಿ ವಾಲಾ ಹೇಳಿದ್ದಾರೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ದಿ ಮೈಸೂರು ಸಿಲ್ಕ್ ಕ್ಲಾತ್ ಮರ್ಚೆಂಟ್ ಸಹಕಾರಿ ಬ್ಯಾಂಕ್ ನ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಬ್ಯಾಂಕುಗಳು ಲಾಭ ಗಳಿಸುವ ಸಂಸ್ಥೆಯಲ್ಲ. ಲಾಭದ ಉದ್ದೇಶವೂ ಇದಕ್ಕೆ ಇರಬಾರದು. ಬಡವರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕು ಎಂದು ಹೇಳಿದ ಅವರು, ಬಡವರು ಮತ್ತು ಮಧ್ಯಮ ವರ್ಗದವರು ಸಾಲ ತೀರಿಸುವಲ್ಲಿ ತೋರಿಸುವ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ಶ್ರೀಮಂತರು ತೋರಿಸುತ್ತಿಲ್ಲ. ಸಾಲ ಪಡೆದ ಮೇಲೆ ಅದನ್ನು ತೀರಿಸುವುದು ಅವರ ಕರ್ತವ್ಯವಾಗಿದೆ ಎಂದು ಹೇಳಿದರು.

ಸರ್ಕಾರ ಮಾಡಬೇಕಾದ ಹಲವು ಕಾರ್ಯಗಳನ್ನು ಸಹಕಾರಿ ಕ್ಷೇತ್ರ ಮಾಡುತ್ತಿದೆ.  ಕರ್ನಾಟಕ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಇದು ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಸಹಕಾರಿ ಕ್ಷೇತ್ರದಿಂದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.  ಸಾರ್ವಜನಿಕರು ತಮ್ಮ ಹಣವನ್ನು ರಾಷ್ಟೀಕೃತ ಬ್ಯಾಂಕ್ ನಲ್ಲಿ ಇಡದೆ ಸಹಕಾರಿ ಬ್ಯಾಂಕ್‍ನಲ್ಲೇ ಇಡುವಂತೆ ಸಲಹೆ ನೀಡಿದ ರಾಜ್ಯಪಾಲರು, ಒಂದೊಮ್ಮೆ ರಾಷ್ಟ್ರೀಕೃತ ಬ್ಯಾಂಕುಗಳ ಹಣ ನಷ್ಟಕ್ಕೊಳಗಾದರೆ ಗ್ರಾಹಕರಿಗೆ ಏನೂ ಸಿಗದು. ಆದರೆ, ಸಹಕಾರಿ ಬ್ಯಾಂಕ್ ಹಣ ಅಂತಿಮವಾಗಿ ಸರ್ಕಾರವಾದರೂ ಜನರಿಗೆ ತಲುಪಿಸುತ್ತದೆ. ಅಥವಾ ವಿಮೆ ರೂಪದಲ್ಲಿ ಸಿಗುತ್ತದೆ ಎಂದು ಹೇಳಿದರು.

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಹಾಗೂ ಹಿಂದಿನ ಸರ್ಕಾರ ಮನ್ನಾ ಮಾಡಿರುವ ಸಾಲ ಸೇರಿದಂತೆ ಒಟ್ಟಾರೆಯಾಗಿ ಸಹಕಾರಿ ಕ್ಷೇತ್ರದ 19 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ನ 30 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಿದೆ. ರಾಜ್ಯದ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಬಡವರ ಬಂಧು ಯೋಜನೆಯಡಿ ಯಾವುದೇ ದಾಖಲೆ ಇಲ್ಲದೇ 10 ಸಾವಿರದ ವರೆಗೂ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 50 ಸಾವಿರ ಬೀದಿ ವ್ಯಾಪಾರಿಗಳು ಅನುಕೂಲ ಪಡೆಯಲಿದ್ದಾರೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಹಾಗೂ ಹಣಕಾಸು ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿರುವ ಸಹಕಾರಿ ಬ್ಯಾಂಕ್ ನಲ್ಲಿ ಸರ್ಕಾರದ ಹಣ ಠೇವಣಿ ಇಡುವ ಬಗ್ಗೆ ಯೋಚನೆ ನಡೆಸುತ್ತಿದ್ದೇವೆ. ಈ ಸಂಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದರು.

ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಶ್ರೀನಿವಾಸ ಮೂರ್ತಿ , ಉಪಾಧ್ಯಕ್ಷ ಆರ್.ಪಿ.ರವಿಶಂಕರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಕೃಷ್ಣಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin