ಫಾರಿನ್ ಟೂರ್ ಮುಗಿಸಿ ಬಂದ ಸಿದ್ದರಾಮಯ್ಯ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಬೆಂಗಳೂರು, ಸೆ.16- ಕಾಂಗ್ರೆಸ್‍ನಲ್ಲಿನ ಆಂತರಿಕ ಭಿನ್ನಮತ, ಅತೃಪ್ತ ಶಾಸಕರ ಅಸಮಾಧಾನ, ರಾಜಕೀಯ ಗೊಂದಲದ ಹಿನ್ನೆಲೆಯಲ್ಲಿ ಅಗತ್ಯವಾದರೆ ಸಮನ್ವಯ ಸಮಿತಿ ಸಭೆ ಕರೆಯುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿದೇಶ ಪ್ರವಾಸದಿಂದ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಇಲ್ಲ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಹೋದರರ ಸಮಸ್ಯೆ ಬಗ್ಗೆಯೂ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ವಾರಗಳ ಕಾಲ ವಿದೇಶ ಪ್ರವಾಸದಲ್ಲಿದ್ದುದರಿಂದ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಪರ್ಕದಲ್ಲಿ ಆಡಳಿತ ಪಕ್ಷದ ಶಾಸಕರಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಸುಳ್ಳು ಹೇಳುತ್ತಿದ್ದಾರೆ ಎಂದ ಅವರು, ವಿದೇಶ ಪ್ರವಾಸ ಚೆನ್ನಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

# ರಾಜಕೀಯ ಬೆಳವಣಿಗೆಗಳ ಕೇಂದ್ರಬಿಂದುವಾದ ಸಿದ್ದರಾಮಯ್ಯನವರ ನಿವಾಸ

ಬೆಂಗಳೂರು,ಸೆ.16-ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ನಲ್ಲಿನ ಭಿನ್ನಮತ ಅತೃಪ್ತ ಶಾಸಕರ ಅಸಮಾಧಾನ, ಆಪರೇಷನ್ ಕಮಲಕ್ಕೆ ಮುಂದಾಗಿರುವ ವಿಚಾರ ಸೇರಿದಂತೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಚರ್ಚೆ ನಡೆಸಿದ್ದಾರೆ.  ಸಿದ್ದರಾಮಯ್ಯನವರ ನಿವಾಸದಲ್ಲಿ ಇಂದು ಬೆಳಗ್ಗೆ ವೇಣುಗೋಪಾಲ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ಅಜಯ್ ಸಿಂಗ್ ಕೂಡ ಮಾತುಕತೆ ಸಂದರ್ಭದಲ್ಲಿ ಹಾಜರಿದ್ದು, ಕಾಂಗ್ರೆಸ್‍ನಲ್ಲಿನ ಆಂತರಿಕ ಭಿನ್ನಮತದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಆಡಳಿತ ಪಕ್ಷಗಳ ಸುಮಾರು 20 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಡಿದೆ. ಇದರ ಬೆನ್ನಲ್ಲೇ ಆಪರೇಷನ್ ಕಮಲವನ್ನು ಬಿಜೆಪಿ ಮಾಡಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಸಿ ಸಮ್ಮಿಶ್ರ ಸರ್ಕಾರ ಎದುರಿಸುತ್ತಿರುವ ಮುಜುಗರವನ್ನು ಪರಿಹರಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಿದ್ದಾರೆ.

ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಹೋದರರ ನಡೆ ಅತೃಪ್ತ ಶಾಸಕರು ಅನುಸರಿಸುತ್ತಿರುವ ಮಾರ್ಗ ಎಲ್ಲವುಗಳ ಬಗ್ಗೆ ಚರ್ಚಿಸಿರುವ ಕಾಂಗ್ರೆಸ್ ನಾಯಕರು ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಆಂತರಿಕ ಭಿನ್ನಮತ ಶಮನಗೊಳಿಸುವ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದ್ದಾರೆ.

Facebook Comments

Sri Raghav

Admin