ಜನ ಬಯಸಿದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yaduyurappa
ತುಮಕೂರು, ಸೆ.16-ಜನ ಬಯಸಿದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ ಎಂದು ಹೇಳುವ ಮೂಲಕ ಆಪರೇಷನ್ ಕಮಲ ಚಾಲ್ತಿಯಲ್ಲಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚ್ಯವಾಗಿ ಹೇಳಿದರು. ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೇಲೆ ರಾಜ್ಯದ ಜನರ ಆಶೀರ್ವಾದವಿದೆ. ಜನ ಬಯಸಿದರೆ ನಾವು ಆಡಳಿತ ನಡೆಸುತ್ತೇವೆ. ಆದರೆ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳಿದರು.

ರಮೇಶ್ ಜಾರಕಿ ಹೊಳಿಯವರನ್ನಾಗಲಿ, ಸತೀಶ್ ಜಾರಕಿ ಹೊಳಿಯವರನ್ನಾಗಲಿ ಬಿಜೆಪಿ ಸೇರಿ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದರು.೧೦೪ ಶಾಸಕರಿದ್ದೇವೆ. ನಮ್ಮ ಜವಾಬ್ದಾರಿಯನ್ನರಿತು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಕೇವಲ ವರ್ಗಾವಣೆ ದಂಧೆ ನಡೆಯುತ್ತಿದೆ. ಅಭಿವೃದ್ಧಿ ಹಳ್ಳ ಹಿಡಿದಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್-ಜೆಡಿಎಸ್ ಒಳಜಗಳಕ್ಕೂ, ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಆಂತರಿಕ ಕಚ್ಚಾಟವನ್ನು ಮೊದಲು ಸರಿಪಡಿಸಿಕೊಳ್ಳಲಿ ನಂತರ ಬಿಜೆಪಿಯವರ ಮೇಲೆ ಆರೋಪ ಮಾಡಲಿ ಎಂದು ಹೇಳಿದರು. ಆಂತರಿಕ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ. ಬೆಳಗಾವಿ ಕಾಂಗ್ರೆಸ್ ಭಿನ್ನಮತಕ್ಕೂ, ಜಾರಕಿ ಹೊಳಿ ಸಹೋದರರ ನಡುವಿನ ಅಸಮಾಧಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅದು ಅವರ ಆಂತರಿಕ ವಿಷಯ ಎಂದು ಹೇಳಿದರು.

ರೌಡಿಶೀಟರ್ ಮೀಟರ್ ಬಡ್ಡಿ ದಂಧೆಯಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆರೋಪಕ್ಕೆ ಕೆಂಡಾಮಂಡಲರಾದ ಯಡಿಯೂರಪ್ಪನವರು, ನಿಮ್ಮ ಬಳಿಯೇ ಎಸಿಬಿ, ಪೊಲೀಸ್ ಸಂಸ್ಥೆಗಳಿವೆ. ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ. ಅದನ್ನು ಬಿಟ್ಟು ನಮ್ಮ ಪಕ್ಷವನ್ನೇಕೆ ಬೀದಿಗೆ ತರುತ್ತೀರಿ ಎಂದು ತಿರುಗೇಟು ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲವನ್ನು ಮನ್ನಾ ಮಾಡಿರುವುದಾಗಿ ಬೊಬ್ಬೆ ಹೊಡೆಯಲಾಗುತ್ತಿದೆ. ಎಲ್ಲಿ ಸಾಲ ಮನ್ನಾ ಆಗಿದೆ? ರೈತರಿಗೆ ನೋಟೀಸ್‍ಗಳು ಬರುತ್ತಿವೆ. ಕೇವಲ ರಾಜಕೀಯ ಮೇಲಾಟ ನಡೆಯುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವಲ್ಲೇ ನಿರತರಾಗಿದ್ದಾರೆ ಎಂದು ಟೀಕಿಸಿದರು. ಮಾಜಿ ಸಂಸದ ಜಿ.ಎನ್.ಬಸವರಾಜ್, ಹೆಬ್ಬಾಕ ರವಿ, ಸ್ಥಳೀಯ ಪಾಲಿಕೆ ಸದಸ್ಯರು ಮುಂತಾದವರು ಈ ಸಂದರ್ಭದಲ್ಲಿದ್ದರು.

Facebook Comments

Sri Raghav

Admin