ನಿಮ್ಮ ವಾಹನಗಳಿಗೆ ಸಚಿವಾಲಯದ ಪಾಸ್ ಅಂಟಿಸಿಕೊಳ್ಳಿ : ಶಾಸಕರಿಗೆ ಸಭಾಧ್ಯಕ್ಷರಿಂದ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

Ramesgh-KLumar--01

ಬೆಂಗಳೂರು, ಸೆ.18-ಹೆದ್ದಾರಿಗಳಲ್ಲಿರುವ ಟೋಲ್‍ಗಳಲ್ಲಿ ಶಾಸಕರು, ಮಾಜಿ ಶಾಸಕರೆಂದು ಹೇಳಿಕೊಂಡು ಟೋಲ್ ಶುಲ್ಕ ಪಾವತಿಸದೆ ಅಲ್ಲಿನ ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಸಚಿವಾಲಯದಿಂದ ನೀಡಿರುವ ವಾಹನ ಪಾಸ್‍ಗಳನ್ನು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುವುದು ಸೂಕ್ತ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಲಹೆ ಮಾಡಿದ್ದಾರೆ.

ಶಾಸಕರಿಗೆ ಜಂಟಿ ಪತ್ರ ಬರೆದಿದ್ದು, ತಮ್ಮ ಸಚಿವಾಲಯ ನೀಡಿದ ವಾಹನಗಳ ಪಾಸ್‍ಗಳನ್ನು ವಾಹನದಲ್ಲಿ ಅಂಟಿಸಿದಾಗಲೂ ಯಾವುದಾದರೂ ಟೋಲ್‍ಗಳಲ್ಲಿ ಮನ್ನಣೆ ನೀಡದಿದ್ದಲ್ಲಿ ಅಥವಾ ಸಹಕರಿಸದಿದ್ದಲ್ಲಿ ಕೂಡಲೇ ಸಚಿವಾಲಯದ ಗಮನಕ್ಕೆ ತರುವಂತೆ ತಿಳಿಸಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಸಹಕರಿಸಲು ಮುಂದೆ ಬಂದಿರುವ ಖಾಸಗಿ ಟೋಲ್ ಕಂಪೆನಿಗಳಾಗಲಿ ಅಥವಾ ಶಾಸಕರು, ಮಾಜಿ ಶಾಸಕರಿಗೆ ಯಾವುದೇ ರೀತಿಯಲ್ಲಿ ಮುಜುಗರವಾಗಬಾರದು ಹಾಗೂ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರ ಗೌರವ ಕಾಪಾಡಲು ಶ್ರಮಿಸಬೇಕಿದೆ ಎಂದು ಆಶಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳಲ್ಲಿರುವ ಟೋಲ್‍ಗಳಲ್ಲಿ ಉಭಯ ಸದನಗಳ ಶಾಸಕರಲ್ಲದವರು, ಮಾಜಿ ಶಾಸಕರಲ್ಲದವರು ಟೋಲ್ ಸಿಬ್ಬಂದಿಗೆ ತಾವು ಶಾಸಕರು ಅಥವಾ ಮಾಜಿ ಶಾಸಕರು ಎಂದು ಹೇಳಿಕೊಂಡು ಟೋಲ್ ಶುಲ್ಕ ಪಾವತಿಸದೆ ದೌರ್ಜನ್ಯ ನಡೆಸುತ್ತಿರುವುದು ನಮ್ಮ ಸಚಿವಾಲಯದ ಗಮನಕ್ಕೆ ಬಂದಿದೆ. ಅಲ್ಲದೆ, ಯಾವುದೇ ಮಾನ್ಯತೆ ಇಲ್ಲದೆ ಸ್ವಯಂಘೋಷಿತ ಸಂಸ್ಥೆಗಳ ಮುಖಂಡರು ಖಾಸಗಿ ವಾಹನಗಳಿಗೆ ತಮ್ಮ ನಾಮಫಲಕಗಳನ್ನು ಸರ್ಕಾರಿ ವಾಹನವೆಂಬಂತೆ ಬಿಂಬಿತವಾಗುವ ರೀತಿಯಲ್ಲಿ ಹಾಕಿಕೊಂಡು ಟೋಲ್‍ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು, ಜೊತೆಗೆ ಟೋಲ್ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗುತ್ತಿರುವುದು ಕಂಡು ಬಂದಿದ್ದು, ಈ ಎರಡೂ ಪ್ರಯತ್ನಗಳು ಕ್ರಿಮಿನಲ್ ಅಪರಾಧವಾಗಿವೆ.

ಈ ಕಾರಣದಿಂದಾಗಿ ನಮ್ಮ ರಾಜ್ಯದ ಎರಡೂ ಸದನಗಳ ಸದಸ್ಯರು, ಮಾಜಿ ಸದಸ್ಯರ ಗೌರವ ಮತ್ತು ಹಿತ ಕಾಪಾಡುವ ದೃಷ್ಟಿಯಿಂದ ಪ್ರಯಾಣ ಮಾಡುವ ಸಂದರ್ಭದಲ್ಲಿ ಸಚಿವಾಲಯದಿಂದ ವಿತರಿಸಲಾಗಿರುವ ವಾಹನ ಪಾಸ್‍ಗಳನ್ನು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಅಂಟಿಸಿ ಪ್ರದರ್ಶಿಸಬೇಕೆಂದು ಜಂಟಿ ಪತ್ರದಲ್ಲಿ ಸಭಾಧ್ಯಕ್ಷರು ಹಾಗೂ ಸಭಾಪತಿ ಸೂಚಿಸಿದ್ದಾರೆ.

Facebook Comments

Sri Raghav

Admin