ವಿದೇಶಿ ಸಿಗರೇಟು ಮಾರುತ್ತಿದ್ದ ಮೂವರ ಸೆರೆ, 5 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

crime
ಬೆಂಗಳೂರು, ಸೆ.18- ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಚಿತ್ರ ಮುದ್ರಿಸದ ವಿದೇಶಿ ಗೋಲ್ಡ್ ಪ್ಯಾಕ್ ಕಿಂಗ್ ಸಿಗರೇಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಆರ್‍ಎಂಸಿ ಯಾರ್ಡ್ ಪೊಲೀಸರು, 5 ಲಕ್ಷ ರೂ. ಮೌಲ್ಯದ 124 ಸಿಗರೇಟು ಬಂಡಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ಮೂಲದ, ಮಲ್ಲೇಶ್ವರಂ ಎಂ.ಡಿ.ಬ್ಲಾಕ್ ನಿವಾಸಿ ಅಮ್ಜದ್ ಪಾಷ (34), ಯಶವಂತಪುರ ನಿವಾಸಿ ಸತೀಶ್ ಕುಮಾರ್ (41) ಹಾಗೂ ಮೈಸೂರು ದೇವರಾಜ್ ಮೊಹಲ್ಲಾ ನಿವಾಸಿ ಜಯಂತಿಲಾಲ್ (36) ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಆರ್‍ಎಂಸಿ  ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋವರ್ಧನ್ ಬಸ್ ನಿಲ್ದಾಣದಲ್ಲಿ ಗೋಲ್ಡ್ ಪ್ಯಾಕ್ ಸಿಗರೇಟು ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಠಾಣೆಯ ಪಿಎಸ್‍ಐ ಎನ್. ಹನುಮಂತರಾಯಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, 10 ಪ್ಯಾಕ್‍ಗಳಿರುವ 124 ಬಂಡಲ್ ಸಿಗರೇಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಗರೇಟು ಪ್ಯಾಕ್ ಮೇಲೆ ಅದರ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಚಿತ್ರಗಳಿಲ್ಲದ ಕಾರಣ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆ 2003ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಅವರು ತಮಿಳುನಾಡಿನ ಮುಬಾರಕ್ ಎಂಬಾತನಿಂದ ಸಿಗರೇಟುಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪಿ.ರವಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಮುಹಮ್ಮದ ಮುಕಾರಮ್ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ರಘುಪ್ರಸಾದ್ ಎನ್ ಮತ್ತು ಹನುಮಂತರಾಯಪ್ಪ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Facebook Comments