ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ : ವಿಶ್ವನಾಥ್ ಟೀಕಾಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

.Vishwnath--01

ಬೆಂಗಳೂರು, ಸೆ.18- ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯುತ್ತಿಲ್ಲ, ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ಹೇಳದೆ ಜನರನ್ನು ದಾರಿತಪ್ಪಿಸುತ್ತಿರುವುದಲ್ಲದೆ ಶಾಸಕರಿಗೆ ಆಮಿಷವೊಡ್ಡುವ ಮೂಲಕ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆರೋಪಿಸಿದರು. ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬಿಜೆಪಿಗೆ ಜನರ ಒಳಿತಿಗಿಂತ, ರಾಜ್ಯದ ಅಭಿವೃದ್ಧಿಗಿಂತ ರಾಜಕಾರಣವೇ ಮುಖ್ಯವಾಗಿದೆ  ಎಂಬುದು ಆ ಪಕ್ಷದ ಇತ್ತೀಚಿನ ಚಟುವಟಿಕೆಗಳಿಂದ ಗೊತ್ತಾಗುತ್ತದೆ ಎಂದರು.

ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ. ಜನರಷ್ಟೇ ಅಲ್ಲದೆ ಶಾಸಕರನ್ನೂ ಕೂಡ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ದೂರಿದ ಅವರು, ಕಾಂಗ್ರೆಸ್‍ನಲ್ಲಿ ಹೇಳಿಕೊಳ್ಳುವಂತಹ ಕ್ಷೋಭೆ ಉಂಟಾಗಿಲ್ಲ. ಕಾಂಗ್ರೆಸ್‍ನಲ್ಲಿನ ಆಂತರಿಕ ಭಿನ್ನಮತದಿಂದ ನಮಗೇನೂ ಭಯವಿಲ್ಲ ಎಂದರು. ಆಕರ್ಷಣೆಗೆ ಯಾರು ಒಳಗಾಗುವುದಿಲ್ಲ ಹೇಳಿ, ಋಷಿಮುನಿಗಳು ಕೂಡ ಒಳಗಾಗಿರುವ ನಿದರ್ಶನಗಳಿವೆ. ಈ ಸರ್ಕಾರ ಉಳಿಯುತ್ತದೆ. ಅವಧಿಯನ್ನೂ ಕೂಡ ಪೂರ್ಣಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರಕ್ಕೆ ಜೆಡಿಎಸ್‍ನಿಂದ ಯಾವುದೇ ಲೋಪವಾಗುವುದಿಲ್ಲ. ಕಾಂಗ್ರೆಸ್‍ನಲ್ಲಿನ ಭಿನ್ನಮತವನ್ನು ಆ ಪಕ್ಷದ ಹೈಕಮಾಂಡ್ ಸರಿಪಡಿಸಿಕೊಳ್ಳುತ್ತದೆ ಎಂದರು.

ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಿ: ಭಾರೀ ಮಳೆಯಿಂದ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗಿನ ಪುನರ್ ನಿರ್ಮಾಣಕ್ಕಾಗಿ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಡಬೇಕು. ಕೊಡಗಿಗಾಗಿ ನೆರವು ಕೋರಿ ಪ್ರಧಾನಿ ಬಳಿಗೆ ರಾಜ್ಯದ ನಿಯೋಗ ಕೊಂಡೊಯ್ದಾಗ ಸಂಸದರು ಹೋಗಲಿಲ್ಲ. ಬೇರೆ ಬೇರೆ ಜಿಲ್ಲೆಯ ಜನರು ಕೊಡಗಿನ ಜನರಿಗಾಗಿ ಸ್ಪಂದಿಸಿದ್ದಾರೆ ಎಂದರು. ಕೊಡಗಿನಲ್ಲಿ ದೊಡ್ಡ ಮಟ್ಟದ ದುರಂತವಾಗಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರು ಏಕೆ ಮಾತನಾಡಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಕೇಂದ್ರದಿಂದ ವಿಶೇಷ ಪ್ಯಾಕೇಜ್ ಕೊಡಿಸಿ ಎಂದು ಅವರು ಒತ್ತಾಯಿಸಿದರು. ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ರಾಜ್ಯ ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡುತ್ತಿಲ್ಲ. ಇಲ್ಲವೆ ರಾಜ್ಯ ಸರ್ಕಾರದ ಲೋಪಗಳನ್ನು ಬೊಟ್ಟು ಮಾಡಿ ತೋರಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಪ್ರಾದೇಶಿಕ ಪಕ್ಷಗಳೇ ಹೆಚ್ಚು ಪ್ರಸ್ತುತ:

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೊರೆಯಾಗಿರುವ ತೈಲ ಬೆಲೆ ಇಳಿಸದಿದ್ದರೂ ರಾಜ್ಯದ ಸಮ್ಮಿಶ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್‍ಗೆ 2ರೂ. ಇಳಿಸುವ ಮೂಲಕ ಬದ್ಧತೆ ಮೆರೆದಿದೆ. ಅಲ್ಲದೆ, ರೈತರ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದೆ. ಇದು ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಾಧ್ಯವಾಗಿದೆ ಎಂದು ಅವರು ಹೇಳಿದರು. ನೆರೆಯ ಆಂಧ್ರ ಪ್ರದೇಶದಲ್ಲೂ ಪ್ರತಿ ಲೀಟರ್ ಡೀಸೆಲ್‍ಗೆ 2ರೂ. ಇಳಿಸಲಾಗಿದೆ. ಆದರೆ, ರಾಜಸ್ಥಾನ ಸರ್ಕಾರ ಹೈಕಮಾಂಡ್ ಹೇಳಬೇಕು ಎಂದು ಹೇಳುತ್ತಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಕಾಯುವ ಅಗತ್ಯವಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದ ನಾಯಕತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡೀಸೆಲ್ ಮತ್ತು ಪೆಟ್ರೋಲ್ ದರವನ್ನು 2ರೂ. ಕಡಿಮೆ ಮಾಡಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ. ಪ್ರಾದೇಶಿಕ ಪಕ್ಷಗಳ ಮಹತ್ವ. ಇಲ್ಲಿ ಹೈಕಮಾಂಡ್ ಸಂಸ್ಕøತಿ ಇರುವುದಿಲ್ಲ ಎಂದರು.

ತೈಲ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ 14 ಲಕ್ಷ ಕೋಟಿ ರೂ. ಲಾಭವಾಗಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಜನರ ಬದುಕು ದುಸ್ತರವಾದರೂ ಬೆಲೆ ಇಳಿಸುವ ಪ್ರಯತ್ನ ಮಾಡಲಿಲ್ಲ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಇಳಿಕೆ ಮಾಡಿರುವ ರಾಜ್ಯ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಹೊರೆಯಾಗುತ್ತಿದೆ. ಇದರ ಪ್ರಯೋಜನ ಪ್ರತಿಯೊಬ್ಬರಿಗೂ ದೊರೆಯಬೇಕೆಂಬುದೇ ಸರ್ಕಾರದ ಉದ್ದೇಶ ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ 45ರೂ. ಇದ್ದ ಡೀಸೆಲ್ ಬೆಲೆ ಇದೀಗ 75ರೂ.ಗೆ ಏರಿಕೆಯಾಗಿದೆ. 52ರೂ. ಇದ್ದ ಪೆಟ್ರೋಲ್ ಬೆಲೆ 82ರೂ.ಗೆ ಏರಿಕೆಯಾಗಿದೆ ಎಂದು ವಿಶ್ವನಾಥ್ ಟೀಕಿಸಿದರು.

Facebook Comments

Sri Raghav

Admin