ಸಿಎಂ ಕೇಜ್ರಿವಾಲ್ ಸೇರಿ 11 ಆಪ್ ಶಾಸಕರಿಗೆ ದೆಹಲಿ ಕೋರ್ಟ್ ಸಮನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Delhi--014

ನವದೆಹಲಿ, ಸೆ.18-ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಹಲ್ಲೆ ಪ್ರಕರಣದ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಹಾಗೂ 11 ಎಎಪಿ ಶಾಸಕರಿಗೆ ದೆಹಲಿ ನ್ಯಾಯಾಲಯವೊಂದು ಇಂದು ಸಮನ್ಸ್ ಜಾರಿಗೊಳಿಸಿದೆ. ಇದರೊಂದಿಗೆ ದೆಹಲಿಯ ಅಮ್ ಆದ್ಮಿ ಪಾರ್ಟಿ ಸರ್ಕಾರಕ್ಕೆ ಕಾನೂನು ಕಂಟಕ ಎದುರಾಗಿದೆ.

ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಫೆಬ್ರವರಿ 19ರಂದು ರಾತ್ರಿ ನಡೆದ ಸಭೈಯೊಂದರ ವೇಳೆ ಪ್ರಕಾಶ್ ಮೇಲೆ ಹಲ್ಲೆ ನಡೆದಿತ್ತು. ಆಗಸ್ಟ್ 13ರಂದು ದೆಹಲಿ ಪೊಲೀಸರಿಂದ ಸಲ್ಲಿಸಲಾದ ದೋಷಾರೋಪ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡ ನಂತರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ದಂಡಾಧಿಕಾರಿ ಸಮರ್ ವಿಶಾಲ್ ಒಟ್ಟು 13 ಜನರಿಗೆ ಸಮನ್ಸ್ ಜಾರಿಗೊಳಿಸಿದರು. ಅಕ್ಟೋಬರ್ 25ರೊಳಗೆ ಪ್ರತ್ಯುತ್ತರ ನೀಡುವಂತೆ ಕೋರ್ಟ್ ಸೂಚಿಸಿದೆ.

ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿರುವ ದೋಷಾರೋಪಗಳಿಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ನ್ಯಾಯಾಲಯ ಹೇಳಿದೆ. ಕೇಜ್ರಿವಾಲ್, ಸಿಸೊಡಿಯಾ ಅವರಲ್ಲದೇ, ಎಎಪಿಯ 11 ಶಾಸಕರುಗಳಾದ ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್, ಸಂಜೀವ್ ಝಾ, ಅಜಯ್ ದತ್, ರಾಜೇಶ್ ರಿಷಿ, ರಾಜೀವ್ ಗುಪ್ತಾ, ಮದನ್ ಲಾಲ್, ಪ್ರವೀಣ್ ಕುಮಾರ್, ಹಾಗೂ ದಿನೇಶ್ ಮೋಹನಿಯಾ ಅವರಿಗೆ ಸಮನ್ಸ್‍ಗಳನ್ನು ಜಾರಿಗೊಳಿಸಲಾಗಿದೆ.

Facebook Comments

Sri Raghav

Admin